ಇಂದಿರಾ ಕ್ಯಾಂಟೀನ್‌ ಅವ್ಯವಸ್ಥೆಗೆ ಅಸಮಾಧಾನ

DC Visit
Published on

ಚಿತ್ರದುರ್ಗ: ಪ್ರವಾಸಿ ಮಂದಿರ ಸಮೀಪದ ಇಂದಿರಾ ಕ್ಯಾಂಟೀನ್‌ಗೆ ಶನಿವಾರ ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾರ್ವಜನಿಕರಿಗೆ ಒದಗಿಸುವ ಆಹಾರದ ಗುಣಮಟ್ಟ, ಶುಚಿ-ರುಚಿ ಕಾಯ್ದುಕೊಳ್ಳುವಂತೆ ಸಿಬ್ಬಂದಿಗೆ ತಾಕೀತು ಮಾಡಿದರು.

ಅಡುಗೆ ತಯಾರಿಕೆ ಕೊಠಡಿ ವೀಕ್ಷಿಸಿದ ಅವರು ನಂತರ ಮಾತನಾಡಿ, ಆಹಾರದ ಗುಣಮಟ್ಟ, ಶುಚಿ-ರುಚಿ ಕೊರತೆ, ದಾಖಲೆಗಳ ಅಸಮರ್ಪಕ ನಿರ್ವಹಣೆ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ. ಉಪಹಾರ, ಊಟ ಉತ್ತಮವಾಗಿಲ್ಲ, ಇದಕ್ಕೆ ಅಗತ್ಯವಿರುವ ಸಾಮಗ್ರಿಗಳ ಸಮರ್ಪಕ ಬಳಕೆಯಾಗುತ್ತಿಲ್ಲ. ಹೀಗಾಗಿ ಇಂದಿರಾ ಕ್ಯಾಂಟೀನ್‌ಗೆ ಸಾರ್ವಜನಿಕರು ಹೆಚ್ಚಾಗಿ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಡಿಮೆ ದರದಲ್ಲಿ ಬಡವರಿಗೆ ಉತ್ತಮ ಗುಣಮಟ್ಟದ, ರುಚಿಯಾದ ಆಹಾರ ಒದಗಿಸಬೇಕು ಎಂಬ ಸದುದ್ದೇಶದಿಂದ ಸರ್ಕಾರ ವಿವಿಧೆಡೆ ಇಂದಿರಾ ಕ್ಯಾಂಟೀನ್ ಆರಂಭಿಸಿ, ನಡೆಸುತ್ತಿದೆ. ಆದರೆ, ಸಿಬ್ಬಂದಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಇನ್ನೂ ಮುಂದೆ ಪ್ರತಿಯೊಂದರ ದಾಖಲೆ ಸಮರ್ಪಕವಾಗಿ ಇರಬೇಕು ಎಂದು ಸೂಚಿಸಿದರು.

ಕ್ಯಾಂಟೀನ್‌ನ ಆಹಾರದ ಗುಣಮಟ್ಟ ಪರಿಶೀಲನೆಗೆ ಸಂಬಂಧಪಟ್ಟ ಅಧಿಕಾರಿ ನಿತ್ಯ ಭೇಟಿ ನೀಡಬೇಕು. ಪೌರಾಯುಕ್ತರು, ಮುಖ್ಯಾಧಿಕಾರಿ ವಾರಕ್ಕೊಮ್ಮೆ ಇಲ್ಲಿಯಾ ಉಪಹಾರ ಮತ್ತು ಊಟ ಸೇವಿಸಿ ಪರಿಶೀಲಿಸಬೇಕು. ಆರೋಗ್ಯ ನಿರೀಕ್ಷಕರು ಇಲ್ಲಿನ ಸ್ವಚ್ಛತೆ ಹಾಗೂ ಶುಚಿತ್ವ ನಿರ್ವಹಣೆ ಸಂಬಂಧ ಹೆಚ್ಚು ಗಮನಹರಿಸಬೇಕು. ಮತ್ತೊಮ್ಮೆ ಭೇಟಿ ನೀಡಿದಾಗ ಲೋಪಕಂಡು ಬಂದಲ್ಲಿ ಅಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಸಿದರು.

ಕಸ ವಿಲೇವಾರಿ ಸಮರ್ಪಕವಾಗಿಸಿ: ಮನೆ ಮನೆಯಿಂದ ಕಸ ಸಂಗ್ರಹಿಸಿ, ವಿಲೇವಾರಿ ಮಾಡುವ ಕಾರ್ಯ ಸಮರ್ಪಕವಾಗಿ ಆಗಬೇಕು. ಹಸಿ ಮತ್ತು ಒಣ ಕಸ ವಿಂಗಡಿಸಿಯೇ ಪಡೆಯಬೇಕು. ನಗರದ ಚರಂಡಿಗಳನ್ನು ಸ್ವಚ್ಛವಾಗಿರಿಸಬೇಕು ಎಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ವೇಳೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್, ನಗರಸಭೆ ಪೌರಾಯುಕ್ತೆ ರೇಣುಕಾ, ಪರಿಸರ ಇಂಜಿನಿಯರ್ ಜಾಫರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net