

ಹಾಸನ : ವಿಧಾನಸಭಾ ಚುನಾವಣೆಯ ದಿನಾಂಕ ನಿಗದಿಯಾಗಿದ್ದು, ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಿಲ್ಲೆಯಾದ್ಯಂತ ಜಾರಿಯಾಗಿದೆ. ಜಿಲ್ಲೆಯಲ್ಲಿ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಯಶಸ್ವಿಯಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ಎಸ್. ಅರ್ಚನಾ ತಿಳಿಸಿದರು.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಬುಧವಾರದಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಅಧಿಕಾರಿ ಮತ್ತು ಸಹಾಯಕ ಚುನಾವಣಾ ಅಧಿಕಾರಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,997 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ 14,83,594 ಮತದಾರರಿದ್ದು, ಇವರಲ್ಲಿ 7,42,279 ಪುರುಷರು 7,41,275 ಮಹಿಳೆಯರು ಹಾಗೂ 40 ಇತರೆ ಮತದಾರು ಇದ್ದಾರೆ. ಈ ಬಾರಿ 26,100 ಮತದಾರರು ಮೊದಲ ಬಾರಿ ಮತದಾನ ಮಾಡಲಿದ್ದಾರೆ. ಇನ್ನೂ ನೋಂದಣಿ ಕಾರ್ಯ ನಡೆಯುತ್ತಿದೆ. ಈ ಬಾರಿ ವಿಶೇಷವಾಗಿ ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಈಗಾಗಲೇ ನೋಡಲ್ ಅಧಿಕಾರಿ ತಂಡ, ಫ್ಲೈಯಿಂಗ್ ಸ್ಕ್ವಾಡ್ ತಂಡ, ವಿಡಿಯೋ ಸರ್ವೆಲೆನ್ಸ್ ತಂಡ, ಜಿಲ್ಲೆಯ ಗಡಿಭಾಗದಲ್ಲಿ ಕಣ್ಗಾವಲು ಹಾಗೂ ಜಿಲ್ಲೆಯಾದ್ಯಂತ ಒಟ್ಟು 33 ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ ಎಂದರು.
ಈ ಬಾರಿ ಚುನಾವಣೆಯಲ್ಲಿ ಸಾರ್ವಜನಿಕರು ಕಾನೂನು ಉಲ್ಲಂಘನೆ ಬಗ್ಗೆ ಅವರೇ ಮೊಬೈಲ್ ಮೂಲಕ ‘ಸಿ ವಿಜಿಲ್’ ಅಪ್ಲಿಕೇಷನ್ ಮೂಲಕ ದೂರು ಸಲ್ಲಿಸಬಹುದಾಗಿದೆ. ಇದರ ಜೊತೆಗೆ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಸಹಾಯವಾಣಿಯನ್ನು ಕೂಡ ಆರಂಭಿಸಲಾಗಿದೆ. ಇದರಲ್ಲಿ ಮತದಾರರಿಗೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಬಹುದು. ಇದಲ್ಲದೆ ‘ಸುವಿಧ’ ಆ್ಯಪ್ ಮೂಲಕ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಉಳಿದ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಪಡೆದುಕೊಳ್ಳಬಹುದಾಗಿದೆ ಎಂದರು.
ಈಗಾಗಲೇ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ಪಕ್ಷಗಳು ಹಾಗೂ ಇನ್ನಿತರೆ ಬ್ಯಾನರ್, ಬಂಟಿಂಗ್ಸ್‌ಗಳನ್ನು ತೆರವುಗೊಳಿಸಲಾಗುತ್ತಿದೆ. ಬ್ಯಾನರ್, ಬಂಟಿಂಗ್ಸ್ ಯಾವುದಾದರೂ ಕಂಡು ಬಂದರೆ ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಆನಂದ, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಇದ್ದರು.
ಕಾಡಾನೆ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ
ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆಗಳಿರುವ ಆಲೂರು, ಸಕಲೇಶಪುರ, ಅರಕಲಗೂಡು, ಬೇಲೂರು ತಾಲೂಕುಗಳಲ್ಲಿ ಈಗಾಗಲೇ 66 ಮತ ಕೇಂದ್ರಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಡಿಎಫ್‌ಓ ಅವರ ನೇತೃತ್ವದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಿಶೇಷವಾಗಿ ಸಾರ್ವಜನಿಕರನ್ನು ಕರೆದುಕೊಂಡು ಬರಲು ಮತ್ತು ಹೋಗಲು ಬಸ್ ವ್ಯವಸ್ಥೆ ಕೂಡ ಮಾಡಲಾಗುವುದು. ಟಾಸ್ಕ್ ಫೋರ್ಸ್ ಸಮಿತಿಯಿಂದ ಕಾಡಾನೆ ಓಡಿಸುವ ಕೆಲಸವೂ ಕೂಡ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಅಂಚೆ ಮತದಾನದಲ್ಲಿ 58,000 ಮತದಾರರು
80 ಮೇಲ್ಪಟ್ಟವರಿಗೆ ಈ ಬಾರಿ ವಿಶೇಷವಾಗಿ ಅಂಚೆ ಮತದಾನ ವ್ಯವಸ್ಥೆಯನ್ನು ಚುನಾವಣಾ ಆಯೋಗ ಜಾರಿಗೆ ತಂದಿದೆ. ಜಿಲ್ಲೆಯಲ್ಲಿ 58,000 ಅಂಚೆ ಮತದಾರರಿದ್ದಾರೆ. ಅವರ ಮಾಹಿತಿ ಪಡೆದುಕೊಂಡು ನಂತರ ಅವರಿಗೆ ಅಂಚೆ ಮತದಾನದ ಚೀಟಿ ವಿತರಿಸಲಾಗುವುದು. ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟವರು 31,630, ವಿಶೇಷ ಚೇತನರು 18,600, ನೂರು ವರ್ಷ ದಾಟಿದವರು 590 ಹಾಗೂ 90 ವರ್ಷ ಮೇಲ್ಪಟ್ಟವರು 6,744 ಮತದಾರರಿದ್ದಾರೆ. ಕೆಲ ದಿನಗಳಲ್ಲಿ ಈ ಎಲ್ಲಾ ಮತದಾರರ ಅಭಿಪ್ರಾಯಗಳನ್ನು ಸಂಗ್ರಹಿಸಿ ಅಗತ್ಯ ಇರುವವರಿಗೆ ಅಂಚೆ ಮತದಾನ ಚೀಟಿ ವಿತರಿಸಲಾಗುವುದು. ಇನ್ನುಳಿದಂತೆ ಕೋವಿಡ್ ಸೋಂಕಿತರು ಮತ್ತು ವಿಶೇಷ ಬಾಧಿತ ವ್ಯಕ್ತಿಗಳಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
66 ಪ್ರಕರಣ ದಾಖಲು: ಎಸ್ಪಿ ಹರಿರಾಂ ಶಂಕರ್
ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಾಗುವುದಕ್ಕಿಂತ ಮುಂಚೆ ಚುನಾವಣಾ ಆಯೋಗದ ನಿರ್ದೇಶನದಂತೆ ಮಾರ್ಚ್ 16 ರಿಂದ 29 ರವರೆಗೆ ಒಟ್ಟು 66 ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.
ಈಗಾಗಲೇ 51,85,090 ಲಕ್ಷ ನಗದು, 18,93,236 ರೂ. ಮೌಲ್ಯದ ಮದ್ಯ 9562.42 ಲೀಟರ್ ಮದ್ಯ ಹಾಗೂ 14,850 ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತದಾರರಿಗೆ ಉಚಿತವಾಗಿ ಉಡುಗೊರೆಗಳನ್ನು ನೀಡಲಾಗುತ್ತಿದ್ದು, ಅವುಗಳಲ್ಲಿ 4382 ಸ್ಟೀಲ್ ಬಾಕ್ಸ್, 1400 ಬ್ಯಾಗ್, 4050 ಲಡ್ಡು ತುಂಬಿದ ಬಾಕ್ಸ್, ಟಾಟಾ 207 ಗೂಡ್ಸ್ ವಾಹನ ಸೇರಿದಂತೆ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ 44,10,600 ರೂ. ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಈಗಾಗಲೇ ಜಿಲ್ಲೆಯಲ್ಲಿರುವ ಎಲ್ಲಾ ರೌಡಿಗಳನ್ನು ಕೂಡ ಮಾನಿಟರ್ ಮಾಡಲಾಗುತ್ತಿದೆ. 32 ಜನ ರೌಡಿಶೀಟರ್‌ಗಳನ್ನ ಗಡಿಪಾರು ಮಾಡಲು ಶಿಫಾರಸ್ಸು ಮಾಡಲಾಗಿದೆ. ಅದರಲ್ಲಿ 16 ರೌಡಿಶೀಟರ್‌ಗಳನ್ನು ಈಗಾಗಲೇ ಗಡಿಪಾರು ಮಾಡಲಾಗಿದೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾನೂನು ಸುವಸ್ಥೆಗೆ ಭಂಗ ತಂದ 184 ಮಂದಿ ರೌಡಿಗಳನ್ನು ಕೂಡ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.