ಇಂದಿನಿಂದ ಶ್ರೀಗುಡಿಹಟ್ಟಿ ವೆಂಕಟರಮಣಸ್ವಾಮಿ ಜಾತ್ರೆ

05 HANUR 2
Published on

ಹನೂರು: ಈ ಭಾಗದ ಚಿಕ್ಕತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಸಮೀಪದ ಬೂದುಬಾಳು ಗ್ರಾಮದ ಶ್ರೀ ಗುಡಿಹಟ್ಟಿ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವ ಮಾ.6ರಿಂದ 5 ದಿನಗಳ ಕಾಲ ನಡೆಯಲಿದೆ.


ಮಾ. 6ರಂದು ರಾತ್ರಿ 7.30ಕ್ಕೆ ದೇಗುಲದಲ್ಲಿ ಗಜೇಂದ್ರ ಮೋಕ್ಷ ಧಾರ್ಮಿಕ ಕಾರ್ಯದ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. 7ರಂದು ಬೆಳಗ್ಗೆ 10.30ಕ್ಕೆ ಸಲ್ಲುವ ಶುಭ ಲಗ್ನದಲ್ಲಿ ಬ್ರಹ್ಮ ರಥೋತ್ಸವ ಜರುಗಲಿದೆ. 8ರಂದು ರಾತ್ರಿ 10 ಗಂಟೆಗೆ ಪ್ರಹ್ಲಾದೋತ್ಸವ, 11ಕ್ಕೆ ಮಂಡ್ಯದ ಕಾಸರವಾಡಿ ಸಚಿನ್ ತಂಡವರಿಂದ ಹರಿಕಥೆ, 9ರಂದು ಮಧ್ಯಾಹ್ನ 1 ಗಂಟೆಗೆ ವಸಂತೋತ್ಸವ ಹಾಗೂ 10ರಂದು ರಾತ್ರಿ 8ಕ್ಕೆ ಗರುಡೋತ್ಸವ ನೆರವೇರುವುದರ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.


ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿ: ಮಾ.7ರಂದು ಜರುಗುವ ಬ್ರಹ್ಮ ರಥೋತ್ಸವದಲ್ಲಿ ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಭಾಗಿಯಗುತ್ತಾರೆ. ಅಲ್ಲದೆ, ಪ್ರಹ್ಲಾದೋತ್ಸವದಂದು ಹರಕೆ ಹೊತ್ತ ಭಕ್ತರು ಕುರಿ, ಕೋಳಿಗಳನ್ನು ಬಲಿ ನೀಡಿ ಪಂಕ್ತಿಸೇವೆ ಹಾಗೂ ಮುಡಿಸೇವೆ ನೇರವೇರಿಸುವುದು ವಾಡಿಕೆ. ಹಾಗಾಗಿ ಈ 2 ದಿನಗಳಂದು ಸಾವಿರಾರು ಭಕ್ತರು ಬೂದುಬಾಳುವಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ.


ಅಗತ್ಯ ಸಿದ್ಧತೆ: ಜಾತ್ರೆಯ ಹಿನ್ನೆಲೆಯಲ್ಲಿ ಈಗಾಗಲೇ ದೇಗುಲದಲ್ಲಿ ಅಗತ್ಯ ಸಿದ್ಧತೆಗಳು ನಡೆದಿದೆಯಲ್ಲದೆ, ತೇರನ್ನು ಸಿದ್ಧಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಸಿಂಗಾನಲ್ಲೂರು ಗ್ರಾಮ ಪಂಚಾಯಿತಿ ಆಡಳಿತ ಈಗಾಗಲೇ ಸ್ವಚ್ಛತಾ ಕಾರ್ಯ ಕೈಗೊಂಡಿದ್ದು, ಭಕ್ತರಿಗೆ ಮೂಲಸೌಕರ್ಯ ಒದಗಿಸಲು ಅಗತ್ಯ ಕ್ರಮವಹಿಸಿದೆ. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್‌ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಬಸ್ ಸೌಕರ್ಯಕ್ಕೆ ಒತ್ತಾಯ: ಪ್ರತಿ ವರ್ಷವೂ ಈ ಜಾತ್ರೆಗೆ ಚಾಮರಾಜನಗರ ಸೇರಿದಂತೆ ಮೈಸೂರು, ಮಳವಳ್ಳಿ, ಮಂಡ್ಯ, ಯಳಂದೂರು, ಕೊಳ್ಳೇಗಾಲ, ನರಸೀಪುರ, ಹನೂರು, ದೊಮ್ಮನಗದ್ದೆ, ಕುರಟ್ಟಿಹೊಸೂರು, ಅಜ್ಜೀಪುರ ಇನ್ನಿತರ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದರೆ ಸಾರಿಗೆ ಇಲಾಖೆ ಅಧಿಕಾರಿಗಳು ಸಮರ್ಪಕ ಬಸ್ ಸೌಕರ್ಯ ಒದಗಿಸುತ್ತಿಲ್ಲ. ಇದರಿಂದ ಭಕ್ತರು ಆಟೋ, ಲಾರಿ ಇನ್ನಿತರ ವಾಹನಗಳಿಗೆ ಹೆಚ್ಚಿನ ಹಣವನ್ನು ನೀಡಿ ತೆರಳಬೇಕಾಗಿದೆ. ಅಲ್ಲದೆ, ಕೆಲವರು ಮಂಗಲ ಗ್ರಾಮದಿಂದ 4 ಕಿ.ಮೀ. ದೂರ ಕಾಲ್ನಡಿಗೆಯಲ್ಲಿ ಸಾಗಬೇಕಾಗಿದೆ. ಇತ್ತ ಕೋವಿಡ್ ವೇಳೆ ಗ್ರಾಮಕ್ಕೆ ಸಂಚರಿಸುತ್ತಿದ್ದ ಬಸ್ ಸ್ಥಗಿತಗೊಂಡಿದ್ದು, ತುಂಬ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಬಸ್ ಮತ್ತೆ ಸಂಚಾರ ಆರಂಭಿಸುವುದರ ಜತೆಗೆ ಜಾತ್ರೆ ವೇಳೆ ಕೊಳ್ಳೇಗಾಲ ಹಾಗೂ ಹನೂರಿನಿಂದ ಸಮರ್ಪಕ ಬಸ್ ಸೌಕರ್ಯ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net