

ಕಲಬುರಗಿ: ಕರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಣೆ ಆಗಿದ್ದರಿಂದ ಮನೆಯಿಂದ ಹೊರಬರಬಾರದು ಎಂಬ ಕಾರಣಕ್ಕೆ ಶನಿವಾರದಿಂದ ಸಾರ್ವಜನಿಕರ ಮನೆಗೆ ಬಾಗಿಲಿಗೆ ತರಕಾರಿ ತಲುಪಿಸುವಂಥ ಕೆಲಸವನ್ನು ಮಹಾನಗರ ಪಾಲಿಕೆ ಆರಂಭಿಸಲಿದೆ. ಇದು ರಾಜ್ಯದಲ್ಲೇ ಮೊದಲ ಪ್ರಯೋಗ ಎಂದು ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ತಿಳಿಸಿದರು.
ಬಡಾವಣೆಗಳಿಗೆ ತರಕಾರಿ ಪೂರೈಸಲು ಪಾಲಿಕೆಯಿಂದ ಬಾಡಿಗೆ ಪಡೆದ 11 ವಾಹನಗಳಿಗೆ ಶುಕ್ರವಾರ ಸಂಜೆ ಚಾಲನೆ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಾರ್ವಜನಿಕರಿಗೆ ನೀಡಿರುವ ಆಯಾ ಬಡಾವಣೆಗಳ ಸ್ಯಾನಿಟರಿ ಇನ್ಸ್ಪೆಕ್ಟರ್ಗಳ ಸಂಖ್ಯೆಗೆ (ಶನಿವಾರದ ವಿಜಯವಾಣಿಯಲ್ಲಿ ಮೊಬೈಲ್ ಸಂಖ್ಯೆ ಪ್ರಕಟ) ಮೊದಲ ದಿನ ಇಲ್ಲವೇ 3ರಿಂದ 6 ಗಂಟೆ ಮೊದಲು ಕರೆ ಮಾಡಿ ಏನೇನು ಬೇಕು ಎಂಬುದನ್ನು ಹೇಳಿದರೆ ಆ ತರಕಾರಿ ಮನೆಗೆ ತಲುಪಿಸಲಾಗುವುದು ಎಂದರು.
ನಗರದಲ್ಲಿ ಎಲ್ಲ ವಾರ್ಡಗಳನ್ನು 11 ವಿಭಾಗವಾಗಿ ವಿಂಗಡಿಸಿ ತರಕಾರಿ ತಲುಪಿಸಲಾಗುವುದು. ಮಾರುಕಟ್ಟೆ ದರದಲ್ಲೇ ಜನರಿಗೆ ತರಕಾರಿ ಸಿಗಲಿದೆ. ನಂತರ ಬೇಡಿಕೆ ಬಂದರೆ ಹಾಲು, ಹಣ್ಣು ಹಾಗೂ ದಿನಸಿ ಸಾಮಗ್ರಿ ತಲುಪಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದರು.
ಇದಕ್ಕೂ ಮೊದಲು ಶಾಸಕ ರೇವೂರ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ಅರಿವು ಮೂಡಿಸಿದರು. ಅಲ್ಲದೆ ಅಂಗಡಿಗಳ ಮುಂದೆ ಅಂತರ ಕಾಯ್ದುಕೊಳ್ಳಲು ವೃತ್ತಗಳನ್ನು ತಾವೇ ಬರೆದರು. ಪರಿಸರ ಅಭಿಯಂತರ ಮುನಾಫ್ ಪಟೇಲ್, ಸುನಿಲ್ ವಂಟಿ ಇತರರಿದ್ದರು.
ಕಂಟ್ರೋಲ್ ರೂಮ್ ಸ್ಥಾಪನೆ
ಲಾಕ್ಡೌನ್ ಹಿನ್ನೆಲೆಯಲ್ಲಿ ಜನರಿಗೆ ತುರ್ತು ಹೊತ್ತಿನಲ್ಲಿ ನೆರವಿಗೆ ಬರಲು ಮತ್ತು ಕರೊನಾ ಕುರಿತ ಪರಿಸ್ಥಿತಿ ನಿಭಾಯಿಸಲು ಮಹಾನಗರ ಪಾಲಿಕೆಯಲ್ಲಿ ವಾರ್ ರೂಮ್ ಮಾದರಿ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದೆ ಎಂದು ಶಾಸಕ ರೇವೂರ ತಿಳಿಸಿದರು. ದಿನದ 24 ಗಂಟೆ ಕಾರ್ಯನಿರ್ವಹಿಸುವಂತೆ ಸಿಬ್ಬಂದಿ ನಿಯೋಜಿಸಿ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಆದೇಶ ಹೊರಡಿಸಿದ್ದಾರೆ. ಜನರು ಸಹಾಯವಾಣಿ ಸಂಖ್ಯೆ 18004251364 ಅಥವಾ 08472-278675ಗೆ ಸಂಪರ್ಕಿಸಬಹುದು ಎಂದರು.