

ಮೈಸೂರು: ಇಂದಿನ ಪೀಳಿಗೆಯ ಮಕ್ಕಳಲ್ಲಿ ಸಹಜ ಬಾಲ್ಯದ ಅನುಭವ ಹಾಗೂ ಸುಖದ ಕೊರತೆ ಉಂಟಾಗುತ್ತಿದ್ದು ಸಹಜ ಬಾಲ್ಯದ ಅನುಭವ ಮೂಡಿಸುವ ಕಾರ್ಯಕ್ರಮಗಳು ಶಿಕ್ಷಣದ ಭಾಗವಾಗಬೇಕು. ಆಗ ಮಾತ್ರ ಅದು ನೈಜ ಶಿಕ್ಷಣವೆನಿಸಿಕೊಳ್ಳಲಿದೆ ಎಂದು ಸಂಗೀತ ಹಾಗೂ ನೃತ್ಯ ಕಲಾವಿದೆ ಶಾಂತಲ ವಟ್ಟಂ ಅಭಿಪ್ರಾಯಪಟ್ಟರು.
ಆರ್.ಟಿ.ನಗರದ ನೈಪುಣ್ಯ ಸ್ಕೂಲ್ ಆಫ್ ಎಕ್ಸ್‌ಲೆನ್ಸ್‌ನಿಂದ ರಾಮಕೃಷ್ಣನಗರದ ರಮಾಗೋವಿಂದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಬೇಸಿಗೆ ಬಂಡಿ ಬೇಸಿಗೆ ಶಿಬಿರ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕಳೆದ ದಶಕಗಳಲ್ಲಿ ಮಕ್ಕಳಿಗೆ ಬೇಸಿಗೆ ರಜಾಕಾಲದಲ್ಲಿ ಯಾವ ತರಹದ ಶಿಬಿರಗಳೂ ಇರಲಿಲ್ಲ. ಆದರೆ ನಮ್ಮ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿರುವುದರ ಪರಿಣಾಮ ಮಕ್ಕಳ ಸಹಜ ಬಾಲ್ಯ ಸುಖದಿಂದ ವಂಚಿತರಾಗುತ್ತಿದ್ದು, ಪಟ್ಟಣ ಪ್ರದೇಶಗಳಲ್ಲಿ ಬಾಲ್ಯದ ಸವಿರುಚಿಯ ಅನುಭವವಿಲ್ಲದೇ ಯಾಂತ್ರಿಕ ಬದುಕಿನಲ್ಲಿ ಸಿಲುಕಿದ್ದಾರೆ ಎಂದರು.
ತಂತ್ರಜ್ಞಾನ ಮನರಂಜನೆಗಳ ಮೇಲೆ ಅವಲಂಬಿತರಾಗಿ ಮಕ್ಕಳು ತಮ್ಮ ಸಹಜ ಬೆಳವಣಿಗೆ ಹಾಗೂ ಬದುಕಿನ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಈ ಕಾರಣದಿಂದ ರಜಾಕಾಲದಲ್ಲಿ ಬೇಸಿಗೆ ಶಿಬಿರಗಳು ಆಯೋಜನೆಗೊಳ್ಳುತ್ತಿದ್ದು ಪೋಷಕರು ಗತ್ಯಂತರವಿಲ್ಲದೇ ಇದನ್ನು ಆಶ್ರಯಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಭಾರತೀಯ ಸಂಸ್ಕೃತಿ ಹಾಗೂ ಕಲೆ ಉಳಿಯ ಬೇಕಾದರೆ ಹಾಗೂ ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳ್ಳಬೇಕಾದರೆ ಮಕ್ಕಳ ಆಸಕ್ತಿ ವಲಯವನ್ನು ಗುರುತಿಸಿ ಉತ್ತೇಜಿಸುವುದು ಶಿಕ್ಷಣ ಸಂಸ್ಥೆಗಳ ಹಾಗೂ ಪೋಷಕರ ಕರ್ತವ್ಯವಾಗಿದೆ. ಆಗ ಮಾತ್ರ ಮಕ್ಕಳು ಪರಿಪೂರ್ಣತೆ ಹೊಂದಿ ಅವರ ಸಾಮರ್ಥ್ಯಕ್ಕನುಗುಣವಾಗಿ ಗುರಿಸಾಧಿಸಲು ಸಾಧ್ಯ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಆರ್.ರಘು ಕೌಟಿಲ್ಯ, ಪ್ರಾಂಶುಪಾಲೆ ಶೋಭಿತ ಆರಾಧ್ಯ, ಸಂಯೋಜನೆ ಡಾ.ಶಾಲಿನಿ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಶಿಬಿರದಲ್ಲಿ ಮಕ್ಕಳು ಕಲಿತ ನೃತ್ಯ, ನಾಟಕ, ಸಮೂಹಗಾಯನ, ರೂಪಕವನ್ನು ಪ್ರಸ್ತುತಪಡಿಸಲಾಯಿತು. ಕಲಾಕೃತಿ, ಉಪಯುಕ್ತ ವಸ್ತುಗಳನ್ನು ಪ್ರದರ್ಶಿಸಿದರು. ಕಲಾವಿದ ರಾಜೇಶ್ ಮಾಧವನ್ ಅವರ ನಿದೇಶನದಲ್ಲಿ ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ಕುಣಿ, ಕುಣಿ ನವಿಲೆ ನಾಟಕ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು.