

ಕೆ.ಎಂ.ದೊಡ್ಡಿ: ಒಂದು ದೇಶದ ಆರ್ಥಿಕ ಸಮಸ್ಯೆ ಉಂಟಾದರೆ ಬೇರೆ ದೇಶದಿಂದ ಹಣ ತಂದು ಸರಿ ಮಾಡಿಕೊಳ್ಳಬಹುದು, ನಮ್ಮ ಮೂಲ ಸಂಸ್ಕೃತಿ ನಾಶವಾದರೆ ಬೇರೆ ದೇಶದ ಸಂಸ್ಕೃತಿಯನ್ನು ನಮ್ಮ ದೇಶದ ಸಂಸ್ಕೃತಿಯನ್ನಾಗಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಸಬ್ಬನಹಳ್ಳಿ ಎಸ್.ಎಂ.ಕುಮಾರ್ ಹೇಳಿದರು.
ಸಮೀಪದ ಸಬ್ಬನಹಳ್ಳಿಯಲ್ಲಿ ಸೌಹಾರ್ದ ಸಾಂಸ್ಕೃತಿಕ ಕಲಾಸಂಘ, ಹನಿಯಂಬಾಡಿ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಕಲಿ ಮಗು ನಮ್ಮ ಜನಪದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಮಕ್ಕಳು ಸಿನಿಮಾ ಮತ್ತು ಟಿವಿಯ ಮಾಧ್ಯಮಗಳಿಗೆ ಮಾರು ಹೋಗುತ್ತಿದ್ದಾರೆ. ಅರ್ಥವಿಲ್ಲದಂತಹ ಸಿನಿಮಾ ಗೀತೆಗಳನ್ನು ಗುನುಗುತ್ತಿರುತ್ತಾರೆ. ಅದರ ಬದಲು ನಮ್ಮ ಹಿರಿಯರು ಹಾಡುತ್ತಿದ್ದ ಜಾನಪದ ಹಾಡುಗಳನ್ನು ಮಕ್ಕಳೂ ಹಾಡಿದರೆ ಮುಂದಿನ ಪೀಳಿಗೆ ಜಾನಪದ ಉಳಿಯುತ್ತದೆ ಎಂದು ತಿಳಿಸಿದರು.
ಹಿರಿಯ ಪರ್ತಕರ್ತ ದೇವರಾಜು ಕೊಪ್ಪ ಮಾತನಾಡಿ, ಮಕ್ಕಳು ಜನಪದ ಗೀತೆಗಳನ್ನು ಕಲಿಯುವುದರಿಂದ ನಿಮ್ಮ ಶಾಲೆಯಲ್ಲಿ ನಡೆಯುವಂತಹ ಪ್ರತಿಭಾ ಕಾಂರಜಿ, ಸಾಂಸ್ಕೃತಿಕ ವೇದಿಕೆಗಳಲ್ಲಿ ಹಾಡಿದರೆ ಜನಪದ ಉಳಿಸುವುದರಲ್ಲಿ ಇಂದಿನ ಮಕ್ಕಳ ಜವಾಬ್ದಾರಿ ಎಂದರು.
ನಂತರ ಹನಿಯಂಬಾಡಿ ಸೌಹಾರ್ದ ಸಾಂಸ್ಕೃತಿಕ ಕಲಾಸಂಘದ ಕಲಾವಿದರಿಂದ ಮಕ್ಕಳಿಗೆ ಮೂಲ ಜನಪದ ಗೀತೆಗಳನ್ನು ಹೇಳಿಕೊಡುವುದರ ಜೊತೆಗೆ, ಗೀತೆಗಳನ್ನು ಹಾಡಿ ರಂಜಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕರಾದ ಶಿವಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಸಂಗೀತ ನೃತ್ಯ ಕಲಾನಿಕೇತನ ಅಧ್ಯಕ್ಷರಾದ ಪಿ.ಶೋಭ ಗೌಡ, ಶಿಕ್ಷಕರಾದ ಮೋಹನ್, ಶಿವಲಿಂಗಯ್ಯ, ಅಂಗನವಾಡಿ ಕಾರ್ಯಕರ್ತೆಯರಾದ ಭಾಗ್ಯ, ಮಕ್ಕಳ ಮನೆ ಶಿಕ್ಷಕಿ ನವ್ಯಶ್ರೀ, ಕಲಾವಿದರಾದ ಹನಿಯಂಬಾಡಿ ಎನ್.ಶೇಖರ್, ಸಂತಕಸಲಗೆರೆ ಬಸವರಾಜು, ಎಚ್.ಪಿ.ವೈರಮುಡಿ, ಎಚ್.ಬಿ.ರಾಮಕೃಷ್ಣ, ಗ್ರಾಮಸ್ಥರು ಉಪಸ್ಥಿತರಿದ್ದರು.