ಇಂದಿನ ಪರಿಶ್ರಮವೇ ಮುಂದಿನ ಯಶಸ್ಸು

28 0
Published on

ಬೆಂಗಳೂರಿನ ಇಸ್ರೋ ಉಪನಿರ್ದೇಶಕಿ ಡಾ.ನಂದಿನಿ ಹರಿನಾಥ್​ ಹೇಳಿಕೆ, ಭಾವಪ್ರಚಾರ ಪರಿಷತ್​ನ ದಶಮಾನೋತ್ಸವ

ತುಮಕೂರು: ಪರಿಶ್ರಮ, ಸಮಯಪಾಲನೆ, ಆತ್ಮವಿಶ್ವಾಸ ಯಶಸ್ಸಿಗೆ ಬೇಕಿರುವ ಮೂರು ಗುಣಗಳು. ನಿಮ್ಮ ಇಂದಿನ ಪರಿಶ್ರಮ ಮುಂದಿನ ಯಶಸ್ಸನ್ನು ನಿರ್ಧರಿಸಲಿದೆ ಎಂದು ಬೆಂಗಳೂರಿನ ಇಸ್ರೋ ಸಂಸ್ಥೆಯ ಉಪನಿರ್ದೇಶಕಿ ಡಾ. ನಂದಿನಿ ಹರಿನಾಥ್​ ಹೇಳಿದರು.

ನಗರದ ರಾಮಕೃಷ್ಣ -ವಿವೇಕಾನಂದ ಆಶ್ರಮದಲ್ಲಿ ರಾಮಕೃಷ್ಣ- ವಿವೇಕಾನಂದ ಭಾವಪ್ರಚಾರ ಪರಿಷತ್​ನ ದಶಮಾನೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಯುವಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ವಿಶ್ವದ ಅನಂತ ಶಕ್ತಿ ಅಡಗಿದೆ. ಅದನ್ನು ಹೊರತರುವುದಕ್ಕೆ ಅತ್ಯವಶ್ಯಕವಾಗಿರುವುದು ಸಂಕಲ್ಪಶಕ್ತಿ ಹಾಗೂ ಇಚ್ಛಾಶಕ್ತಿ. ಸಂಕಲ್ಪ, ಶಿಸ್ತು, ಸೇವೆಯಿಂದ ಜೀವನ ಸಾರ್ಥಕತೆಯನ್ನು ಪಡೆಯುತ್ತದೆ ಎಂದರು. ಸಮಯ ಅತ್ಯಮೂಲ್ಯವಾದುದು. ಯಾವುದು ಅವಶ್ಯಕವೋ ಅದರ ಕಡೆ ಯುವಜನತೆ ಗಮನ ಕೊಡಬೇಕೇ ಹೊರತು ವಿಚಲಿತಗೊಳಿಸುವ ವಿಚಾರಗಳನ್ನು ರ್ನಿಲಕ್ಷಿ$್ಯಸಬೇಕು. ಗುರಿಯ ಕಡೆ ಸದಾ ಗಮನವಿರಬೇಕು. ಸಮಯವನ್ನು ವ್ಯರ್ಥ ಮಾಡದೆ, ಸೋಮಾರಿತನವಿಲ್ಲದೆ, ನಿಖರತೆಯಿಂದ ಕಾರ್ಯ ನಿರ್ವಹಿಸಬೇಕು. ಸೋಲು ಯಶಸ್ಸಿನ ಗುಟ್ಟು. ನಿಮ್ಮ ಎಲ್ಲ ಜ್ಞಾನವನ್ನು, ಸಾಧನೆಯನ್ನು ಸಮಾಜದ ಒಳಿತಿಗಾಗಿ, ಉದ್ಧಾರಕ್ಕಾಗಿ ಉಪಯೋಗಿಸಬೇಕು. ಅವಕಾಶಗಳು ಬಾಗಿಲು ತೆರೆದಾಗ ರಾಕೆಟ್​ ಹಾಗೆ ಮುನ್ನುಗ್ಗಬೇಕು. ಇಚ್ಛಾಶಕ್ತಿಯಿದ್ದಲ್ಲಿ ಒಂದಲ್ಲ ಹಲವಾರು ದಾರಿಗಳಿರುತ್ತವೆ ಎಂದು ಸಲಹೆಯಿತ್ತರು.

ಆಂಧ್ರಪ್ರದೇಶದ ನೆಲ್ಲೂರಿನ ರಾಮಕೃಷ್ಣ ಮಿಷನ್​ನ ಕಾರ್ಯದರ್ಶಿ ಪೂಜ್ಯ ಸ್ವಾಮಿ ಹೃದಾನಂದಜೀ ಮಹಾರಾಜ್​ ಮಾತನಾಡಿ, ವಿದ್ಯಾರ್ಥಿಗಳು ಆತ್ಮಶಕ್ತಿ, ಧೀಶಕ್ತಿ, ಕ್ರಿಯಾಶಕ್ತಿಗಳನ್ನು ಜಾಗೃತಗೊಳಿಸಿ, ಬೆಳೆಸಿಕೊಂಡಾಗ ಎಂತಹ ಸಮಸ್ಯೆಗಳನ್ನು ಎದುರಿಸುವ ಶಕ್ತಿ ದೊರೆಯುತ್ತದೆ. ಆತ್ಮವಿಶ್ವಾಸವುಳ್ಳ ವ್ಯಕ್ತಿ ಎಂತಹ ಸಂದರ್ಭದಲ್ಲಿದ್ದರೂ ಕಾರ್ಯಸಾಧನೆಯಲ್ಲಿ ಖಂಡಿತಾ ಯಶಸ್ವಿಯಾಗುತ್ತಾನೆ. ಸ್ವಾಮಿ ವಿವೇಕಾನಂದರು ಆತ್ಮತತ್ವವನ್ನು ಜಗತ್ತಿಗೆ ಬೋಧಿಸಿದರು. ಆತ್ಮವಿಶ್ವಾವಿಲ್ಲದವನು ನಾಸ್ತಿಕ. ನಿಮ್ಮಲ್ಲಿ ಅನಂತಶಕ್ತಿಯಿದೆ ಎಂಬುದರಲ್ಲಿ ವಿಶ್ವಾಸವಿಟ್ಟು ಮುನ್ನಡೆಯಬೇಕು ಎಂದು ಹೇಳಿದರು.

ಮಾದಿಹಳ್ಳಿ ರಾಮಕೃಷ್ಣ ಮಿಷನ್ನಿನ ಕಾರ್ಯದರ್ಶಿ ಸ್ವಾಮಿ ಮಂಗಳನಾಥಾನಂದಜೀ, ಬೆಂಗಳೂರಿನ ಶ್ರೀ ಭವತಾರಿಣಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜಿ ವಿವೇಕಮಯೀ, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​, ಅಂಕಣಕಾರ ಸೂಲಿಬೆಲೆ ಚಕ್ರವರ್ತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮರಣೋತ್ತರ ಶೌರ್ಯ ಪ್ರಶಸ್ತಿಗೆ ಭಾಜನರಾದ ಅಜಿತ್​ ವಿ ಭಂಡಾರ್ಕರ್​ ಪತ್ನಿ ಶಕುಂತಲಾ ಅಜಿತ್​ ಭಂಡಾರ್ಕರ್​ ಅವರನ್ನು ಯುವಸಮ್ಮೇಳನದಲ್ಲಿ ಗೌರವಿಸಲಾಯಿತು. ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಗತಿಸಿ, ವಂದಿಸಿದರು. ಸ್ವಾಮಿ ಪ್ರಕಾಶಾನಂದಜೀ ನಿರೂಪಿಸಿದರು.

ಆತ್ಮವಿಶ್ವಾಸದಿಂದ ಮುನ್ನಡೆಯಿರಿ: ಗದಗ--&ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಾತನಾಡಿ, ಶಿಕ್ಷಿತರಿಗೆ ಮರು ಶಿಕ್ಷಣ ನೀಡಿ ಸ್ವಾತಂತ್ರದ ಜವಾಬ್ದಾರಿ ಹೊರಲು ಸಾಮರ್ಥ್ಯಶಿಲರನ್ನಾಗಿ ಮಾಡಬೇಕಿರುವುದು ಇಂದಿನ ಅವಶ್ಯಕತೆ. ಯುವಕರಲ್ಲಿ ಧೈರ್ಯ, ಸ್ಥೆ$ರ್ಯಗಳನ್ನು ತುಂಬಿ, ಗುರಿಯನ್ನು ಸ್ಪಷ್ಟಪಡಿಸುವ ಕಾರ್ಯಕ್ರಮಗಳೇ ಯುವಸಮ್ಮೇಳನಗಳು. ನಮ್ಮ ಶಕ್ತಿಯನ್ನು ನಾವು ಅರಿಯುವುದರ ಜತೆಗೆ ಯಾರಿಗೂ ಎರಡನೇಯವರಾಗಿರದೆ ನಾನು ಭಾರತೀಯ ಎಂಬ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದರು.

ಜ್ಞಾನ, ಭಕ್ತಿ, ಶ್ರದ್ಧೆಯ ಪಾಕ ಈ ಯುವಸಮ್ಮೇಳನ. ರಾಷ್ಟ್ರಪರಿವರ್ತನೆಯಲ್ಲಿ ಯುವಕರ ಪಾತ್ರ ಅನಿವಾರ್ಯ. ಮಕ್ಕಳು, ಯುವಕರಿಗೆ ಸ್ಫೂರ್ತಿ, ಮಾರ್ಗದರ್ಶನ ನೀಡುವುದು ಗೃಹಸ್ಥರ ಆದ್ಯ ಕರ್ತವ್ಯ. ಆಧ್ಯಾತ್ಮ, ಸತ್ಯಶೋಧನೆ, ಬುದ್ಧಿವಿಕಾಸದಿಂದ ಜ್ಞಾನಧಾರಣೆ ಇವುಗಳು ಕುಟುಂಬ ಜೀವನದಲ್ಲಿ ಹಾಸುಹೊಕ್ಕಾಗಿರಬೇಕು. ಶ್ರೀರಾಮಕೃಷ್ಣ ವಿವೇಕಾನಂದರ ಜೀವನ ಸಂದೇಶಗಳ ಅಧ್ಯಯನದಿಂದ ಹೊಸಜೀವನ ನಮ್ಮದಾಗಲಿದೆ. | ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್​ಅಧ್ಯಕ್ಷರು, ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net