ಇಂಡೋ-ಸ್ವಿಡ್ಜ್ ಜಂಟಿ ರೇಷ್ಮೆ ಕೃಷಿ

27 SDLP 01
Published on

ಶಿಡ್ಲಘಟ್ಟ: ತಾಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಕೆ.ಸುರೇಶ್ ಅವರ ಚಾಕಿ ಕೇಂದ್ರಕ್ಕೆ ಸೋಮವಾರ ಸ್ವಿಡ್ಜರ್‌ಲ್ಯಾಂಡ್‌ನ 16 ತಜ್ಞರ ತಂಡ ಭೇಟಿ ನೀಡಿ ಹಿಪ್ಪುನೇರಳೆ ತೋಟ, ರೇಷ್ಮೆಹುಳು ಸಾಕಾಣಿಕೆ ಮನೆ ವೀಕ್ಷಿಸಿತು. ನಂತರ ನಗರದ ರೇಷ್ಮೆಗೂಡು ಮಾರುಕಟ್ಟೆ, ಸ್ವಯಂಚಾಲಿತ ರೀಲಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಿತು.

ಈ ವೇಳೆ ಮಾತನಾಡಿದ ಸ್ವಿಡ್ಜರ್‌ಲ್ಯಾಂಡ್ ಜಾನುವಾರು ಅಭಿವೃದ್ಧಿ ಸಂಸ್ಥೆ ಸಲಹೆಗಾರ ಫ್ರಿಟ್ಜ್ ಶ್ನೀಡರ್,

ಭಾರತದ ಕೇಂದ್ರೀಯ ರೇಷ್ಮೆ ಮಂಡಳಿ ಸಹಕಾರ ಪಡೆದು ರೇಷ್ಮೆಯ ವಿವಿಧ ಹಂತಗಳ ಅಧ್ಯಯನ ಕೈಗೊಳ್ಳಲಾಗಿದೆ. ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ಈಗಾಗಲೇ ಸ್ವಲ್ಪ ರೇಷ್ಮೆ ಉತ್ಪಾದನೆಯಿದ್ದು, ಭಾರತದ ಸಹಕಾರದೊಂದಿಗೆ ಅಭಿವೃದ್ಧಿಗೊಳಿಸುವ ಯೋಜನೆಯಿದೆ. ಹೈನುಗಾರಿಕೆ, ನೀರಿನ ಸದ್ಬಳಕೆ ಬಗ್ಗೆಯೂ ಅಧ್ಯಯನ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ಇಂಡೋ-ಸ್ವಿಡ್ಜ್ ಜಂಟಿಯಾಗಿ ರೇಷ್ಮೆ ಬೆಳೆಯುವ ಉದ್ದೇಶವಿದ್ದು, ಈ ನಿಟ್ಟಿನಲ್ಲಿ ತಮಿಳುನಾಡು, ಕೇರಳ, ಆಂಧ್ರ ಮತ್ತು ಕರ್ನಾಟಕದಲ್ಲಿ ಕೇಂದ್ರೀಯ ರೇಷ್ಮೆ ಮಂಡಳಿ ಸಹಕಾರ ಪಡೆದು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ವಿವರಿಸಿದರು.

ಕೇಂದ್ರ ರೇಷ್ಮೆ ಮಾರಾಟ ಮಹಾಮಂಡಳಿ ನಿವೃತ್ತ ಅಧಿಕಾರಿ ನಾಗರಾಜ್ ಅವರೊಂದಿಗೆ ಶಿಡ್ಲಘಟ್ಟ ತಾಲೂಕಿನಲ್ಲಿ ರೇಷ್ಮೆ ಬೆಳೆಯುವ ಬಗ್ಗೆ ಕ್ಷೇತ್ರ ದರ್ಶನ ಮೂಲಕ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದರು.

ರೇಷ್ಮೆ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಜನಾದರ್ನಮೂರ್ತಿ, ಎಚ್.ಜಿ.ಗೋಪಾಲಗೌಡ ಹಾಜರಿದ್ದರು.

ನೀರಿನ ಸದ್ಬಳಕೆ, ಕಾಫಿ ಕುರಿತು ಅಧ್ಯಯನ:  ಶಿಡ್ಲಘಟ್ಟ ತಾಲೂಕು ರೇಷ್ಮೆ ಮತ್ತು ಹೈನುಗಾರಿಕೆಗೆ ಪ್ರಸಿದ್ಧಿ ಪಡೆದಿದ್ದು, ಅಧ್ಯಯನಶೀಲರಿಗೆ ಪ್ರಶಸ್ತವಾಗಿದೆ. ರೇಷ್ಮೆಯ ವಿವಿಧ ಹಂತಗಳು, ಮಾರುಕಟ್ಟೆ ಸ್ಥಿತಿಗತಿ, ಉತ್ಪನ್ನಗಳು, ಬಳಕೆ ಎಲ್ಲವನ್ನೂ ಸ್ವಿಡ್ಜರ್‌ಲ್ಯಾಂಡ್‌ನ 16 ತಜ್ಞರಿಗೆ ಮಾಹಿತಿ ನೀಡಲಾಗುತ್ತಿದ್ದು, ನೀರಿನ ಸದುಪಯೋಗ ಹಾಗೂ ಕಾಫಿಯ ಕುರಿತಂತೆಯೂ ಅಧ್ಯಯನ ನಡೆಸುತ್ತಿದ್ದಾರೆ ಎಂದು ಕೇಂದ್ರ ರೇಷ್ಮೆ ಮಾರಾಟ ಮಹಾಮಂಡಳಿ ನಿವೃತ್ತ ಅಧಿಕಾರಿ ನಾಗರಾಜ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net