ಇಂಡಿಯಾ ಮೈತ್ರಿಯಲ್ಲಿರುವವರು ಜಾಮೀನು ಗಿರಾಕಿಗಳು

Basangouda Yatnal
Published on

ರಾಯಚೂರು: ಇಂಡಿಯಾ ಮೈತ್ರಿಕೂಟದಲ್ಲಿರುವ ಸೋನಿಯಾಗಾಂ, ರಾಹುಲ್ ಗಾಂ, ಲಾಲುಪ್ರಸಾದ ಯಾದವ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸೇರಿದಂತೆ ಹಲವರು ಜಾಮೀನು ಮೇಲೆ ಹೊರಗಿರುವ ಗಿರಾಕಿಗಳಾಗಿದ್ದು, ಜನರಿಗೆ ಲೋಕಸಭೆ ಚುನಾವಣೆಯಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂದು ಗೊತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ಸ್ಥಳೀಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಮೋದಿ ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಾಂಗ್ರೆಸ್‌ನವರು ಸುಳ್ಳು ಪ್ರಚಾರ ಮಾಡುವ ಮೂಲಕ ಅಕಾರ ಹಿಡಿಯುವ ಭ್ರಮೆಯಲ್ಲಿದ್ದಾರೆ ಎಂದರು.
ಬಿಜೆಪಿ ನಾಯಕರನ್ನು ಸೆಳೆಯಲು ಡಿ.ಕೆ.ಶಿವಕುಮಾರ ಆಟ ಆರಂಭಿಸಿದ್ದಾರೆ. ತಮ್ಮ ಪಕ್ಷದ ಶಾಸಕರನ್ನು ಉಳಿಸಿಕೊಳ್ಳಲು ಆಗದವರು ಬಿಜೆಪಿ ನಾಯಕರನ್ನು ಸೆಳೆಯುತ್ತಾರಂತೆ, ಪಕ್ಷದಲ್ಲಿ ಇರುವವರಿಗೆ ಟಿಕೆಟ್ ನೀಡದಚವರು ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ನೀಡುವುದಾಗಿ ಹೇಳುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಒಬ್ಬರೇ ಲಿಂಗಾಯತರಾ, ಬಿಜೆಪಿಯಲಿದ್ದು, ಸಚಿವ, ಮುಖ್ಯಮಂತ್ರಿಯಾಗಿದ್ದಾಗ ಲಿಂಗಾಯತರು ಅವರಿಗೆ ನೆನಪಾಗಲಿಲ್ಲವೆ. ಮೂರು ತಿಂಗಳು ಕಾಯಿರಿ ಶೆಟ್ಟರ್ ಭೂ ಹಗರಣ ಹೊರಬರುತ್ತದೆ.
ನೇತಾಜಿ ಸುಭಾಷಚಂದ್ರ ಬೋಸ್‌ರನ್ನು ಬಲಿ ಪಡೆದವರು ಕಾಂಗ್ರೆಸ್‌ನವರು. ಬೋಸ್ ಅವರದ್ದು ಕೊಲೆಯೇ, ವಿಮಾನ ಅಪಘಾತವೇ ಎನ್ನುವುದನ್ನು ಕಾಂಗ್ರೆಸ್‌ನವರು ಮುಚ್ಚಿಟ್ಟಿದ್ದಾರೆ. ನೆಹರು ಮಾಡಿಸಿದ್ದಾರೆ ಎಂದು ಅನೇಕರು ಹೇಳುತ್ತಾರೆ ಎಂದು ಬಿಜೆಪಿಯವರು ಹಂತಕರೆಂದು ಹೇಳಿದ್ದ ಸಿಎಂ ಹೇಳಿಕೆಗೆ ತಿರುಗೇಟು ನೀಡಿದರು.
ರೈತರ ಆತ್ಮಹತ್ಯೆ ಕುರಿತು ಕಾಂಗ್ರೆಸ್ ನಾಯಕರು ಉಡಾೆಯಾಗಿ ಮಾತನಾಡುತ್ತಿದ್ದಾರೆ. ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಕ್ಕರೆ ಖಾತೆ ಸಚಿವರು ಹೇಳುತ್ತಿದ್ದು, ಅವರಿಗೆ ಐದು ಕೋಟಿ ರೂ. ಕೊಡುತ್ತೇನೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದರು.
ಗಣೇಶ ಆಚರಣೆಗೆ ಕಾಂಗ್ರೆಸ್‌ನವರು ಅಡ್ಡಿ ಪಡಿಸುತ್ತಿದ್ದಾರೆ. ಡಿಜೆ ಬಳಸಬೇಡಿ, ಟೆಂಟ್ ಹಾಕಬೇಡಿ ಎನ್ನುತ್ತಿದ್ದಾರೆ. ನಾವೇನು ಪಾಕಿಸ್ತಾನದಲ್ಲಿದ್ದಿವಾ. ಇದಕ್ಕೆ ನಾವ್ಯಾರು ಹೆದರುವುದಿಲ್ಲ. ಎಲ್ಲ ಧರ್ಮದವರ ಆಚರಣೆಗೆ ನಿಯಮ ರೂಪಿಸಲಿ, ಕೇವಲ ಗಣೇಶ ಚತುರ್ಥಿಗೆ ಮಾತ್ರ ಕಾನೂನು ಹೇಳುವುದು ಸರಿಯಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ಈ ಸಂದರ್ಭದಲ್ಲಿ ನಗರ ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net