ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಕೌಶಿಕ್ ಕಲಾಕೃತಿ

25sirsi5
Published on

ಶಿರಸಿ: ಹಲವು ಬಗೆಯ ಚಿತ್ರ ರಚನೆ ಮೂಲಕ ನಾಡಿನ ಗಮನ ಸೆಳೆದಿದ್ದ ಶಿರಸಿಯ ಚಿತ್ರಕಲಾವಿದ ಕೌಶಿಕ್ ಹೆಗಡೆ ಅವರ ಕಲಾಕೃತಿ ಇಂಡಿಯಾ ಬುಕ್ ಆಫ್ ರೆಕಾರ್ಡ್​ಗೆ ಆಯ್ಕೆಯಾಗಿದೆ.

ನೂರು ಚಿತ್ರಗಳನ್ನು ಸಂಯೋಜಿಸಿ ಡಾ. ರಾಜಕುಮಾರ ಅವರ ಚಿತ್ರವನ್ನು ತಯಾರಿಸಿದ್ದಾರೆ. ಕಳೆದ ಆಗಸ್ಟ್​ನಲ್ಲಿ ಇವರು 8 ತಾಸು ಈ ಚಿತ್ರ ರಚಿಸಿ ಆಯ್ಕೆ ಸಮಿತಿಗೆ ಕಳಿಸಿಕೊಟ್ಟಿದ್ದರು. ಅದು ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲಾಗಲು ಆಯ್ಕೆಗೊಂಡು ಸೆ. 19ರಂದು ಈ ಕುರಿತಾದ ಪ್ರಮಾಣಪತ್ರ ಈಗ ಕೌಶಿಕ್ ಅವರ ಕೈ ಸೇರಿದೆ. 2021ರ ಜನವರಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಮುದ್ರಿತವಾಗಲಿದೆ ಎಂದು ತಿಳಿಸಲಾಗಿದೆ.

ಶಿರಸಿ ತಾಲೂಕಿನ ಗಡಿಹಳ್ಳಿ ಕೌಶಿಕ್ ಹೆಗಡೆ ಐಬಿವಿಎ ಕೋರ್ಸ್ ಪೂರೈಸಿ 8 ವರ್ಷಗಳಿಂದ ಚಿತ್ರಕಲೆಯ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಲ್ಯಾಂಡ್ ಸ್ಕೇಪ್, ಎಬ್ಬಾಕ್ಸ್ ಪೇಂಟಿಂಗ್, ವಾಟರ್ ಕಲರ್ ಮತ್ತು ತೈಲವರ್ಣ ಬಳಕೆ, ಕಲರ್ ಪೆನ್ಸಿಲ್, ಪೆನ್ಸಿಲ್ ಶೇಡಿಂಗ್​ನಿಂದ ಚಿತ್ರಗಳನ್ನು ರಚಿಸುತ್ತ ಬಂದಿದ್ದಾರೆ. ಇವರ ಅನೇಕ ಕಲಾಕೃತಿಗಳು ನಾಡಿನ ಗಮನ ಸೆಳೆದಿವೆ. ಉಡುಪಿ, ಮಂಗಳೂರು, ಬೆಂಗಳೂರು, ತುಮಕೂರು, ಹಂಪಿ ಸೇರಿ ನೆರೆಯ ಗೋವಾ, ಮಹಾರಾಷ್ಟ್ರಗಳಲ್ಲಿ ನಡೆದ ಪ್ರದರ್ಶನ, ತರಬೇತಿ ಶಿಬಿರ, ಸ್ಪರ್ಧೆಗಳಲ್ಲಿ ಪಾಲ್ಗೊಂಡು ಬಹುಮಾನ ಪಡೆದಿದ್ದಾರೆ. ಇವರ ಕಲಾಕೃತಿಗಳು ತುಮಕೂರು ಕಲಾ ಪ್ರಶಸ್ತಿ, ಕೆಮೆಲಿನ್ ಕಲಾ ಪ್ರಶಸ್ತಿ, ಅಯೋಧ್ಯಾ ಕಲಾ ಪ್ರಶಸ್ತಿಗೆ ಆಯ್ಕೆಗೊಂಡಿದ್ದು ಗಮನಾರ್ಹ ಸಂಗತಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net