

ಬೈಲಹೊಂಗಲ: ಪಟ್ಟಣದ ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ನರ್ಸರಿ ವಿದ್ಯಾರ್ಥಿ ಸೂರ್ಯನ್ ನಾರಾಯಣ ಜೋಶಿ ತನ್ನ ಅಮೋಘ ಜ್ಞಾಪಕ ಶಕ್ತಿಯಿಂದಾಗಿ ಇಂಡಿಯಾ ಬುಕ್ ಆಫ್ ರೆಕಾಡ್ಸ್ ಸೇರುವ ಮೂಲಕ ನಾಡಿಗೆ ಕೀರ್ತಿ ತಂದಿದ್ದಕ್ಕಾಗಿ ಸಂಸ್ಥೆಯ ವತಿಯಿಂದ ಶುಕ್ರವಾರ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಕಾರ್ಯದರ್ಶಿ ಪ್ರೊ.ಸಿ.ವ್ಹಿ.ಜ್ಯೋತಿ ಮಾತನಾಡಿ, ಬೆಳೆಯುವ ಪೈರು ಮೊಳಕೆಯಲ್ಲಿ ಎಂಬ ಮಾತಿದೆ. ಪಾಲಕರ ಬೆಂಬಲ ಇದ್ದರೆ ಮಕ್ಕಳು ಏನು ಬೇಕಾದರೂ ಸಾಧನೆ ಮಾಡಬಲ್ಲರು ಎಂಬುದಕ್ಕೆ ಸೂರ್ಯನ್ ಸಾಕ್ಷಿ. ಈತ ತನ್ನ ಅಸಾಮಾನ್ಯ ಬುದ್ಧಿಮತ್ತೆಯಿಂದ ಎಲ್ಲರ ಮನೆ ಮಾತಾಗಿದ್ದಾನೆ ಎಂದರು.
ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಸಬನೀಸ್, ಸದಸ್ಯರಾದ ಎಸ್.ಪಿ.ಗದಗ, ಬಿ.ಎಸ್.ತಟವಟಿ, ಎಸ್.ಎಸ್.ಪತ್ತಾರ, ಶಿಕ್ಷಕಿಯರಾದ ಎಂ.ಆರ್ .ದಾಸೋಗ, ಎ.ಎಸ್.ಪಾಟೀಲ, ನಾರಾಯಣ ಜೋಶಿ, ವೆಂಕಟೇಶ ಜೋತಿ ಇತರರು ಇದ್ದರು.