ಇಂಡಿಯಾ ಒಕ್ಕೂಟಕ್ಕೆ ಬೆಂಬಲಿಸಲು ನಿರ್ಧಾರ

mamashetty moula mulla
Published on

ಕಲಬುರಗಿ: ಕೇಂದ್ರ ಸರ್ಕಾರ ರೈತ ವಿರೋಧಿ ನೀತಿಯನ್ನು ಅನುಸರಿಸಿದ್ದು, ಪ್ರಸ್ತುತ ಚುನಾವಣೆಯಲ್ಲೂ ಬಿಡುಗಡೆ ಮಾಡಿರುವ ಬಿಜೆಪಿ ಪ್ರಣಾಳಿಕೆಯಲ್ಲಿ ರೈತರ ಆದಾಯ ದುಪ್ಪಟ್ಟುಗೊಳಿಸುವ ಯಾವುದೇ ಅಂಶಗಳು ಸೇರಿಸದೆ ಅನ್ಯಾಯ ಮುಂದುವರಿಸಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಪ್ರಮುಖರಾದ ಶರಣಬಸಪ್ಪ ಮಮಶೆಟ್ಟಿ, ಮೌಲಾಮುಲ್ಲಾ ಆರೋಪಿಸಿದರು.
ದೇಶದಲ್ಲಿ ನಿತ್ಯ ರೈತರ ಆತ್ಮಹತ್ಯೆ ಸಂಭವಿಸುತ್ತಿದ್ದು, ಕೃಷಿ ಬಿಕ್ಕಟ್ಟಿನ ಗಂಭೀರ ವಿಷಯದ ಬಗ್ಗೆ ಬಿಜೆಪಿ ಮೌನವಹಿಸಿದೆ. ಕಾರ್ಪೊರೇಟ್ ಪರ ವಿಕಸಿತ ಭಾರತ ನೀತಿ ಹಿಂತೆಗೆದುಕೊಳ್ಳದೆ ರೈತರಿಗೆ ಲಾಭದಾಯಕ ಬೆಲೆ ಮತ್ತು ರೈತ ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡುತ್ತಿಲ್ಲ. ಆದ್ದರಿಂದ ಇಂಡಿಯಾ ಒಕ್ಕೂಟಕ್ಕೆ ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸಲು ನಿರ್ಧರಿಸಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು.
ತೊಗರಿ ಬೆಳೆಗಾರರ ಹಿತ ಕಾಪಾಡುವಲ್ಲಿ ಸರ್ಕಾರಗಳು ಕಡೆಗಣನೆ ಮಾಡುತ್ತಿವೆ. ಫಸಲ್ ಭೀಮಾ ಹೆಸರಿನಲ್ಲಿ ರೈತರು ಹಣ ಕಟ್ಟುತ್ತಿದ್ದು, ವಾಪಸ್ ಬರುತ್ತಿಲ್ಲ. ತೊಗರಿ ಬೋರ್ಡ್ ಕಣ್ಮರೆಯಾಗಿದೆ. ಭೀಮಾ ಪಲ್ಸ್ ಎಂದು ಕಾಟಾಚಾರಕ್ಕೆ ಉದ್ಘಾಟಿಸಿದ್ದು, ಯಾವುದೇ ಸೌಲಭ್ಯ ನೀಡಿಲ್ಲ. ತೊಗರಿ ಪಾರ್ಕ್ ಕನಸಾಗಿಯೇ ಉಳಿದಿದೆ. ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ ಎಂದು ಆರೋಪಿಸಿದರು.
ಭೀಮಾಶಂಕರ ಮಾಡಿಯಾಳ, ಶರಣಬಸಪ್ಪ ಗಣಜಲಖೆಡ, ಜಾವೇದ್ ಹುಸೇನ್, ಅರ್ಜುನ ಗೊಬ್ಬುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net