

ಇಂಡಿ: ಎಲ್ಲಿ ನೋಡಿದರೂ ಬರಿ ಹಂದಿಗಳು. ಯಾವ ಗಲ್ಲಿಯಲ್ಲಿ ತಿರುಗಿದರೂ ಅಲ್ಲೆಲ್ಲಾ ಅವುಗಳದ್ದೇ ದರ್ಬಾರ್..!
ಇಂಡಿ ಪಟ್ಟಣದ ಗಲ್ಲಿಗಲ್ಲಿಗಳಲ್ಲಿ ಹಿಂಡು ಹಿಂಡಾಗಿ ತಿರುಗುವ ಹಂದಿಗಳ ಹಾವಳಿ ಮಿತಿ ಮೀರಿದೆ. ಇದರಿಂದಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಪಟ್ಟಣದ ಸಿಂದಗಿ ರಸ್ತೆಯ ಬಸವರಾಜೇಂದ್ರ ನಗರ, ವಿದ್ಯಾನಗರ, ಬೀರಪ್ಪ ನಗರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ.
ಬಸವರಾಜೇಂದ್ರ ದೇವಸ್ಥಾನದ ಹಿಂಭಾಗದಲ್ಲಿ ವಾರ್ಡ್‌ನ ನಿವಾಸಿಗಳು ಹಂದಿ ಹಾವಳಿಯಿಂದ ಬೇಸತ್ತು ಹೋಗಿದ್ದಾರೆ. ಇಲ್ಲಿ ಹಿಂಡು ಹಿಂಡಾಗಿ ಹಂದಿಗಳು ಯಾವ ಮುಲಾಜಿಲ್ಲದೆ ಮನೆಗಳಿಗೆ ನುಗ್ಗುತ್ತವೆ. ಇವುಗಳ ವಿಪರೀತ ಕಾಟದಿಂದ ಪ್ರತಿಯೊಬ್ಬರೂ ಹಗಲು ಹೊತ್ತಲ್ಲೂ ತಮ್ಮ ಮನೆಗಳ ಬಾಗಿಲನ್ನು ಹಾಕಿಕೊಳ್ಳುತ್ತಿದ್ದಾರೆ.
ಇನ್ನು ಹಳೆಯ ಬಜಾರ್ (ಗಾಂಧಿ ಬಜಾರ್)ನಲ್ಲಿಯೂ ಹಂದಿಗಳ ಹಾವಳಿ ಬಹಳ ಮಿತಿ ಮೀರಿದೆ. ಅಲ್ಲಿಯ ಕೆಜಿಎಸ್ ಶಾಲೆಯ ಪಕ್ಕದಲ್ಲೇ ಕಸಕಡ್ಡಿ ಒಗೆಯುತ್ತಿರುವುದರಿಂದ ಹಂದಿಗಳು ಅಲ್ಲಿ ಕಸಕಡ್ಡಿ ತಿನ್ನಲು ಬಂದು ಒದ್ದಾಡಿ ಗಬ್ಬು ವಾಸನೆ ಸೂಸುವಂತೆ ಮಾಡುತ್ತಿವೆ. ಇದರಿಂದ ಅಲ್ಲಿನ ಶಾಲಾ ಮಕ್ಕಳಿಗೆ ಸಾಂಕ್ರಾಮಿಕ ರೋಗ ಹರಡುವ ಭಯದ ವಾತಾವರಣ ಸಹ ನಿರ್ಮಾಣವಾಗಿದೆ.
ಹಂದಿಗಳ ಹಾವಳಿ ಬಹಳಷ್ಟು ಹೆಚ್ಚಾಗಿದೆ. ರಸ್ತೆಯಲ್ಲಿ ಚಿಕ್ಕಮಕ್ಕಳು, ವೃದ್ಧರು ಸಂಚರಿಸದಂತಹ ವಾತಾವರಣ ಸೃಷ್ಟಿಯಾಗಿದೆ. ಪುರಸಭೆಯವರಿಗೆ ಐದಾರು ಬಾರಿ ಮೌಖಿಕವಾಗಿ ತಿಳಿಸಿದರೂ ಎರಡು ದಿನದಲ್ಲೇ ಹಂದಿಗಳ ಸ್ಥಳಾಂತರ ಮಾಡುತ್ತೇವೆ ಎಂದು ತಿಳಿಸುತ್ತಾರೆ. ಮತ್ತೆ ನಾಲ್ಕು ದಿನ ಬಿಟ್ಟು ಹೇಳಿದರೂ ಮತ್ತೆ ಅದೇ ಉತ್ತರ ಸಿಕ್ಕಿದೆ. ಮಂಜುನಾಥ ಕಾಮಗೊಂಡ, ಸಾರ್ವಜನಿಕ
ಹಂದಿಗಳ ಹಾವಳಿ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಒಂದು ಬಾರಿ ಹಂದಿಗಳನ್ನು ಹಿಡಿದು ಸ್ಥಳಾಂತರ ಮಾಡಿದ್ದೇವೆ. ಬುಧವಾರ ಅಥವಾ ಗುರುವಾರದರೆಗೆ ಇನ್ನಷ್ಟು ಹಂದಿಗಳ ಸ್ಥಳಾಂತರ ಮಾಡುತ್ತೇವೆ. ಸೋಮು ನಾಯಿಕ್, ಕಿರಿಯ ಆರೋಗ್ಯ ನಿರೀಕ್ಷಕರು ಪುರಸಭೆ ಇಂಡಿ