

ಬೆಂಗಳೂರು: ಒಂದೇ ಸೆಕೆಂಡಿನಲ್ಲಿ ಹಾಕಬಹುದಾದ ಕರೊನಾ ಇಂಜೆಕ್ಷನ್‌ಗೆ ಹೆದರಿದರೆ ಹೇಗಮ್ಮ, ನಮ್ಮ ಜೀವ ಹಾಗೂ ಜೀವನ ಕಾಪಾಡುವ ಕರೊನಾ ಲಸಿಕೆ ಬಗ್ಗೆಯೇ ಭಯಪಡದೆ ಲಸಿಕೆ ಹಾಕಿಸಿಕೊಳ್ಳಬೇಕು...
ಹೊಸಕೋಟೆ ತಾಲೂಕು ಲಕ್ಕೊಂಡನಹಳ್ಳಿ ಹಾಗೂ ಕುರುಬರಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಂಗಳೂರು ಗೋರಕ್ಷಣಾ ಶಾಲೆ ಹಾಗೂ ಭಗವಾನ್ ಮಹಾವೀರ ಜೈನ್ ಆಸ್ಪತ್ರೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಉಚಿತಾ ಲಸಿಕಾ ಅಭಿಯಾನದಲ್ಲಿ ಹಾಜರಿದ್ದ ಮಹಿಳೆಯರಿಗೆ ಮಾಜಿ ಸಚಿವ ಎಂಟಿವಿ ನಾಗರಾಜ್ ವ್ಯಾಕ್ಸಿನ್ ಬಗೆಗಿನ ಅಪಪ್ರಚಾರ ಹಾಗೂ ಭಯದ ಬಗ್ಗೆ ತಿಳಿ ಹೇಳಿದ್ದು ಹೀಗೆ.
ಕುಟುಂಬ ಎಂಬ ಸೌಧಕ್ಕೆ ಆಧಾರ ಸ್ತಂಭವೇ ಮಹಿಳೆಯರು. ನೀವೇ ವ್ಯಾಕ್ಸಿನ್ ತೆಗೆದುಕೊಳ್ಳಲು ಹಿಂದೇಟು ಹಾಕಿದರೆ ಹೇಗೆ. ಕರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಎಂಟಿಬಿ ಸಲಹೆ ನೀಡಿದರು.
ಯಾವುದೇ ಕಷ್ಟ-ನಷ್ಟ, ನೋವುಗಳನ್ನು ಎದುರಿಸುವ ನೀವೇ ಕೇವಲ ಇಂಜೆಕ್ಷನ್‌ಗೆ ಹೆದರಿದರೆ ಹೇಗೆ, ಒಂದೇ ಒಂದು ಇಂಜೆಂಕ್ಷನ್ ನಿಮ್ಮನ್ನು, ನಿಮ್ಮ ಕುಟುಂಬವನ್ನು ಪ್ರಾಣಾಪಾಯದಿಂದ ಪಾರು ಮಾಡುತ್ತದೆ. ಈ ಬಗ್ಗೆ ಯಾವುದೇ ಅಂಜಿಕೆ ಅಪನಂಬಿಕೆ ಬೇಡ ಎಂದು ಅತ್ಮವಿಶ್ವಾಸ ತುಂಬಿದರು. ಕರೊನಾ ಮೂರನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಲಸಿಕೆ ಪಡೆಯಲು ಮುಂದಾಗಿದ್ದಾರೆ. ಇದರಿಂದ ಸಹವಾಗಿ ಬೇಡಿಕೆಯೂ ಹೆಚ್ಚಾಗಿದೆ. ಸರ್ಕಾರಗಳು ಲಸಿಕೆ ಪೂರೈಸಲು ಅವಿರತ ಶ್ರಮಿಸುತ್ತಿವೆ ಎಂದರು.
ಗಡಿಭಾಗಗಳಲ್ಲಿ ಅಲರ್ಟ್: ನೆರೆ ರಾಜ್ಯಗಳಲ್ಲಿ ಕರೊನಾ ಮೂರನೇ ಅಲೆ ತೀವ್ರಗೊಳ್ಳುತ್ತಿದ್ದು, ರಾಜ್ಯದ ಗಡಿಭಾಗಗಳಲ್ಲಿ ಸರ್ಕಾರ ಕಟ್ಟೆಚ್ಚರ ವಹಿಸಿದೆ ಎಂದು ಎಂಟಿಬಿ ನಾಗರಾಜ್ ಹೇಳಿದರು. ಆಗಸ್ಟ್ ಅಂತ್ಯ ಹಾಗೂ ಸೆಪ್ಟೆಂಬರ್‌ನಲ್ಲಿ ಮೂರನೇ ಅಲೆ ತೀವ್ರಗೊಳ್ಳುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
22 ಸಾವಿರ ವ್ಯಾಕ್ಸಿನ್: ಕರೊನಾ ಲಾಕ್‌ಡೌನ್‌ನಿಂದ ಕಂಗೆಟ್ಟಿರುವ ಬಡವರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಎಂಟಿಬಿ ಚಾರಿಟಬಲ್ ಟ್ರಸ್ಟ್‌ನಿಂದ ಉಚಿತಾ ವ್ಯಾಕ್ಸಿನ್ ಅಭಿಯಾನ ಹಮ್ಮಿಕೊಂಡಿದ್ದು, ಇದುವರೆಗೆ ಹೊಸಕೋಟೆ ತಾಲೂಕಿನಲ್ಲಿ 22 ಸಾವಿರ ಲಸಿಕೆಯನ್ನು ಉಚಿತವಾಗಿ ನೀಡಲಾಗಿದೆ ಎಂದು ಎಂಟಿಬಿ ನಾಗರಾಜ್ ತಿಳಿಸಿದರು.
ಮೂರನೇ ಅಲೆ ಆತಂಕದಲ್ಲಿ ಈ ಅಭಿಯಾನವನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಕಾರ್ಯೋನ್ಮುಖರಾಗಿದ್ದೇವೆ. ಕರೊನಾ ಎರಡನೇ ಅಲೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಇದರ ಮಧ್ಯೆ ಮೂರನೇ ಅಲೆ ಬಗ್ಗೆ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಕರೊನಾ ನಿಯಮಗಳನ್ನು ನಿರ್ಲಕ್ಷ್ಯ ಮಾಡಿದರೆ ಅಪಾಯ ಎದುರಿಸಬೇಕಾಗುತ್ತದೆ ಎಂದರು.