ಇಂಜಿನಿಯರ್ ತಲೆಗೆ ಪೆಟ್ಟು ಘಟನೆಗೆ ಖಂಡನೆ,ಪ್ರತಿಭಟನೆ

CTD 13 Protest--03
Published on

ಚಿತ್ರದುರ್ಗ: ತಾಲೂಕಿನ ಕಸವನಹಳ್ಳಿ ಗ್ರಾಮದಲ್ಲಿ ಜು.10 ರಂದು ಪಿಎಂಜಿಎಸ್‌ವೈ ಉಪವಿಭಾಗದ ಸಹಾಯಕ ಇಂಜಿನಿಯರ್ ಜಿ.ಎಂ.ನಾಗರಾಜ್ ಅವರ ಮೇಲೆ ಹಲ್ಲೆ ಮಾಡಿದ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಸರ್ಕಾರಿ ನೌಕರರ ಸಂಘ, ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ನೂರಾರು ನೌಕರರು ಗುರುವಾರ ಶಾಂತಿಯುತ ಪ್ರತಿಭಟನೆ ನಡೆಸಿದರು.

ಪ್ರಕರಣ ಸಂಬಂಧ ದೂರು ದಾಖಲಾಗಿ ಮೂರ‌್ನಾಲ್ಕು ದಿನಗಳಾಗಿದ್ದರೂ ತಪ್ಪಿತಸ್ಥರನ್ನು ಬಂಧಿಸಿಲ್ಲ. ಕೂಡಲೇ ಪೊಲೀಸರು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಬೇಕು. ಹಲ್ಲೆಗೆ ಒಳಗಾದ ಇಂಜಿನಿಯರ್‌ಗೆ ನ್ಯಾಯ ದೊರಕಿಸಿಕೊಡಬೇಕೆಂದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

ಕಸವನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ವೇಳೆ ಕರ್ತವ್ಯನಿರತ ನಾಗರಾಜು ಅವರ ಮೇಲೆ ಏಕಾಏಕಿ ಏಳು ಮಂದಿ ದಾಳಿ ನಡೆಸಿದ್ದಾರೆ. ಕಲ್ಲಿನಿಂದ ಬಲವಾಗಿ ಹಲ್ಲೆ ಮಾಡಿದ್ದಾರೆ. ಅವರ ಮಾತುಗಳನ್ನು ಸೌಜನ್ಯದಿಂದ ಕೇಳಿಸಿಕೊಳ್ಳದೇ ದೌರ್ಜನ್ಯದಿಂದ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದರು.

ರಕ್ತಸ್ರಾವವಾಗಿ ನಿತ್ರಾಣಗೊಂಡ ನಾಗರಾಜ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಸಾರ್ವಜನಿಕ ಸೇವೆಯಲ್ಲಿ ಇರುವವರಿಗೂ ಕುಟುಂಬವಿದೆ ಎಂಬುದನ್ನು ಮರೆತು ದೌರ್ಜನ್ಯ ಎಸಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸರ್ಕಾರಿ ನೌಕರರು ತಪ್ಪು ಮಾಡಿದಾಗ ಮೇಲಧಿಕಾರಿಗಳಿಗೆ ದೂರು ನೀಡಬಹುದು. ಸಮಾಧಾನ ಆಗದಿದ್ದರೆ, ಲೋಕಾಯುಕ್ತಕ್ಕೆ ಮನವಿ ಸಲ್ಲಿಸಬಹುದು. ಅದನ್ನು ಬಿಟ್ಟು ದೈಹಿಕ ಹಲ್ಲೆ ನಡೆಸುವುದು ದೇಶದ ಕಾನೂನಿನ ಚೌಕಟ್ಟಿನೊಳಗೆ ಇಲ್ಲ. ಇದು ಅಕ್ಷಮ್ಯ ಅಪರಾಧವಾಗಿದೆ. ಅಲ್ಲದೆ, ಸರ್ಕಾರಿ ಸೇವೆಗೂ ಅಡ್ಡಿಪಡಿಸಿದ್ದು, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನೌಕರರ ರಕ್ಷಣೆಗೆ ಮುಂದಾಗಬೇಕು ಎಂದು ಕೋರಿದರು.

ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ, ಪದಾಧಿಕಾರಿಗಳಾದ ಎಸ್.ಕೆ.ಮಂಜುನಾಥ್, ಸುಧಾ, ಪಾತಪ್ಪ, ಚಕ್ರವರ್ತಿ, ಶ್ರೀನಿವಾಸ್, ಬಿ.ಆರ್.ತಿಪ್ಪೇಸ್ವಾಮಿ, ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್, ಮಲ್ಲೇಶಪ್ಪ, ಇಲಾಖೆ ಮುಖ್ಯಸ್ಥ ಶ್ರೀಧರ್, ನೂರಾರು ಸರ್ಕಾರಿ ನೌಕರರು, ಗುತ್ತಿಗೆದಾರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net