ಇಂಜಿನಿಯರಿಂಗ್ ವೃತ್ತಿಯಲ್ಲಿ ವಿಶೇಷ ಕಲಿಕೆ ಅಗತ್ಯ

22 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂಜಿನಿಯರಿಂಗ್, ವೈದ್ಯಕೀಯ ಪದವಿಗಳು ವೃತ್ತಿಪರ ಕೋರ್ಸ್‌ಗಳು. ಈ ವೃತ್ತಿಗಳಲ್ಲಿ ನಿರಂತರ ಕಲಿಕೆ ಅಗತ್ಯ. ಹೀಗಾಗಿ ಅತ್ಯಾಧುನಿಕ ಬೆಳವಣಿಗೆಗಳ ಬಗ್ಗೆ ನಿತ್ಯವೂ ನಿರಂತರ ಕಲಿಕೆ ಮೂಲಕ ಅಪ್‌ಡೇಟ್ ಆಗಬೇಕು ಎಂದು ಕೆಎಲ್‌ಇ ವಿಶ್ವನಾಥರಾವ್ ದೇಶಪಾಂಡೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ. ವಾದಿರಾಜ ಕುಲಕರ್ಣಿ ಹೇಳಿದರು.
ನಗರದ ವಾಲ್ಮಿ ಸಂಸ್ಥೆಯಲ್ಲಿ ಜಲ ಸಂಪನ್ಮೂಲ ಇಲಾಖೆಯಲ್ಲಿ ಹೊಸದಾಗಿ ಸೇರ್ಪಡೆಯಾದ ಇಂಜಿನಿಯರ್‌ಗಳಿಗೆ ಒಂದು ತಿಂಗಳ ಕಾಲ ಏರ್ಪಡಿಸಿರುವ ಕಡ್ಡಾಯ ತರಬೇತಿ ಶಿಬಿರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವಾಲ್ಮಿ ನಿರ್ದೇಶಕ ರಾಜೇಶ ಅಮ್ಮಿನಭಾವಿ ಮಾತನಾಡಿ, ಬದಲಾಗುತ್ತಿರುವ ಇಂದಿನ ದಿನಗಳಲ್ಲಿ ಇಂಜಿನಿಯರಿಂಗ್ ಕೋರ್ಸ್ ಮಾಡಿದರೆ ಸಾಲದು. ವಿದ್ಯಾರ್ಥಿಳು ಇಂಜಿನಿಯರಿಂಗ್‌ನಲ್ಲೇ ವಿಶೇಷ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಆಳವಾದ ಅಧ್ಯಯನ ಮಾಡಿ ಆಯಾ ಕ್ಷೇತ್ರದಲ್ಲಿ ಪರಿಣತಿ ಹೊಂದಬೇಕು ಎಂದರು.
ಪ್ರೊ. ಬಿ.ವೈ. ಬಂಡಿವಡ್ಡರ ಮಾತನಾಡಿ, ತರಬೇತಿ ಶಿಬಿರದಲ್ಲಿ ನೀಡಲಾಗುವ ಪಾಠಗಳನ್ನು ಅರಿತುಕೊಂಡು ನೀವು ಇಲ್ಲಿಂದ ವಾಪಸ್ ಆದಾಗ ಅವುಗಳನ್ನು ಜಾರಿಗೆ ತರಲು ಶ್ರಮಿಸಬೇಕು. ನೀರಿನ ಲಭ್ಯತೆ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಕಾಲುವೆಯ ಕೊನೆಯಂಚಿನ ರೈತರಿಗೆ ನೀರು ಪೂರೈಸುವುದು ಸವಾಲಿನ ಕೆಲಸ. ರೈತರ ವಿಶ್ವಾಸ ಗಳಿಸಿ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಬಲವರ್ಧನೆ ಮಾಡಲು ಶ್ರಮಿಸಬೇಕು. ಜತೆಗೆ ಸಹಭಾಗಿತ್ವ ನೀರಾವರಿ ಪದ್ಧತಿ ಮಹತ್ವವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ನೀರಿನ ಸದ್ಬಳಕೆಗೆ ಪ್ರೋತ್ಸಾಹಿಸಬೇಕು ಎಂದರು.
ತರಬೇತಿ ಶಿಬಿರದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ 62 ಇಂಜಿನಿಯರ್‌ಗಳು ಭಾಗವಹಿಸಿದ್ದಾರೆ. ಚೇತನ ಶೆಟ್ಟಿ, ವಾಲ್ಮಿ ಸಿಬ್ಬಂದಿ, ಇತರರು ಇದ್ದರು. ಅನುರಾಧಾ ಮಳಗಿ ಹಾಗೂ ಫಕ್ಕೀರೇಶ ಅಗಡಿ ನಿರೂಪಿಸಿದರು. ಪ್ರಭಾಕರ ಹಾದಿಮನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net