

ಬೈಲಹೊಂಗಲ: ಸುಕ್ಷೇತ್ರ ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಡಾ.ಶಿವಾನಂದ ಭಾರತಿ ಶ್ರೀಗಳ ರಜತ ರಥೋತ್ಸವ, ಶಿವಯೋಗೀಶ್ವರ ಮಹಾರಥೋತ್ಸವವು ಗುರುವಾರ ಸಂಜೆ ಲಕ್ಷಕ್ಕೂ ಹೆಚ್ಚು ಭಕ್ತರ ಜಯಘೋಷಗಳೊಂದಿಗೆ ಅದ್ದೂರಿಯಾಗಿ ಜರುಗಿತು.
ಡಾ.ಶಿವಾನಂದ ಭಾರತಿ ಸ್ವಾಮೀಜಿ, ಬೀದರ ಸಿದ್ಧಾರೂಢ ಮಠದ ಶಿವಕುಮಾರೇಶ್ವರ ಸ್ವಾಮೀಜಿ, ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮೀಜಿ, ಕುಳ್ಳೂರು ಶಿವಯೋಗೀಶ್ವರ ಮಠದ ಬಸವಾನಂದ ಭಾರತಿ ಸ್ವಾಮೀಜಿ, ಹುಬ್ಬಳ್ಳಿ ಜಡಿಸಿದ್ದೇಶ್ವರ ಯೋಗೇಂದ್ರಮಠದ ರಾಮಾನಂದ ಭಾರತಿ ಸ್ವಾಮೀಜಿ, ಮಲ್ಲಾಪುರ ಚಿದಾನಂದ ಸ್ವಾಮೀಜಿ, ಇಂಚಲ ಶ್ರೀಮಠದ ಆಡಳಿತಾಧಿಕಾರಿ ಪೂರ್ಣಾನಂದ ಸ್ವಾಮೀಜಿ ಮಹಾರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಭಕ್ತರು ರಥಗಳಿಗೆ ಹೂ, ಹಣ್ಣು, ಕಾಯಿ, ಖಾರಿಕ್, ನೈವೇದ್ಯ ಅರ್ಪಿಸಿ ಭಕ್ತಿ ಮೆರೆದರು. ರಥಗಳನ್ನು ವಿವಿಧ ಹೂಮಾಲೆ, ಬಣ್ಣಬಣ್ಣ ಕಾಗದಗಳಿಂದ ಅಲಂಕರಿಸಲಾಗಿತ್ತು. ಎರಡು ರಥಗಳಲ್ಲಿ ಡಾ.ಶಿವಾನಂದ ಭಾರತಿ ಶ್ರೀಗಳು ಆಸೀನರಾಗಿ ಭಕ್ತರನ್ನು ಹರಸಿದರು. ಹರ ಹರ ಮಹಾದೇವ, ಶಿವಯೋಗೀಶ್ವರ ಮಹಾರಾಜಕೀ ಜೈ, ಸಿದ್ಧಾರೂಢ ಮಹಾರಾಜ ಕೀ ಜೈ., ರೇವಣಸಿದ್ದೇಶ್ವರ ಮಹಾರಾಜ ಕೀ ಜೈ, ಜಯಘೋಷಗಳು ಮುಗಿಲು ಮುಟ್ಟಿದವು.
ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಪೊಲೀಸ್ ಇಲಾಖೆ ಜಾತ್ರೆಯನ್ನು ಸುವ್ಯವಸ್ಥಿತವಾಗಿ ನಡೆಸಿಕೊಟ್ಟಿತು.
ಡಿ.ಬಿ. ಮಲ್ಲೂರ, ಎಸ್.ಎಂ. ರಾಹುತನವರ, ಬಸವರಾಜ ಜನ್ಮಟ್ಟಿ, ನಾಗಪ್ಪ ಮೇಟಿ, ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಸ್.ಜಿ. ಜಕಾತಿ, ಗೌರವ ಕಾರ್ಯದರ್ಶಿ ಎಸ್.ಎನ್. ಕೊಳ್ಳಿ, ಕೋಶಾಧ್ಯಕ್ಷ ಎಸ್.ಎಸ್. ರಾಯನಾಯ್ಕರ, ನಿರ್ದೇಶಕರಾದ ಎಸ್.ಬಿ. ವಾರಿ, ಶಿವಾನಂದ ಕರಿಗಾರ, ಈರಪ್ಪ ಪಟ್ಟಣಶೆಟ್ಟಿ, ಎಸ್.ಆರ್. ಕೋಲಕಾರ, ಸಿ.ಎಸ್. ರಾಯನಾಯ್ಕರ, ಎಸ್.ಎಂ. ಬೇವಿನಕೊಪ್ಪ, ಆರ್.ಎಸ್. ಪಟ್ಟಣಶೆಟ್ಟಿ ಇತರರಿದ್ದರು.
ಅಂಬಾಪರಮೇಶ್ವರಿ ದರ್ಶನ:ಭಕ್ತರು ಗ್ರಾಮದ ಅಂಬಾಪರಮೇಶ್ವರಿ ದೇವಿ ದರ್ಶನ ಪಡೆದರು. ಮಠದಲ್ಲಿ ಶಿವಯೋಗೀಶ್ವರರು, ರೇವಯ್ಯ ಅಜ್ಜ, ಸಿದ್ದರಾಮೇಶ್ವರ ದರ್ಶನ ಪಡೆದರು. ಸಂಘಟಕರು ನಿರಂತರವಾಗಿ ಮಹಾಪ್ರಸಾದ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು. ಭಕ್ತರು ಪ್ರಸಾದ ಸವಿದು ಪುನೀತರಾದರು.