

ಮಂಡ್ಯ: ಅಂಗಡಿಗಳಲ್ಲಿ ಅಳವಡಿಸಿರುವ ನಾಮಫಲಕ ಹಾಗೂ ಜಾಹೀರಾತುಗಳಲ್ಲಿ ಕನ್ನಡ ಪದಗಳನ್ನು ಚಿಕ್ಕದಾಗಿ ಬಳಸುತ್ತಿರುವುದನ್ನು ಆಕ್ಷೇಪಿಸಿ ಕದಂಬ ಸೈನ್ಯ ಸಂಘಟನೆ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು, ಇಂಗ್ಲೀಷ್ ಪದಗಳಿದ್ದ ಪೋಸ್ಟರ್‌ಗಳನ್ನು ಹರಿದು ವ್ಯಾಪಾರಸ್ಥರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ಹೆಚ್ಚು ಕನ್ನಡ ಭಾಷೆ ಬಳಸುವ ಜಿಲ್ಲೆ ಎಂಬ ಬಿರುದು ಪಡೆದುಕೊಂಡಿದೆ. ಆದರೆ ಇದಕ್ಕೆ ಮಸಿ ಬಳಿಯುವ ಕೆಲಸವನ್ನು ಕೆಲ ವ್ಯಾಪಾರಸ್ಥರು ಹಾಗೂ ವಾಣಿಜ್ಯೋದ್ಯಮಿಗಳು ಮಾಡುತ್ತಿದ್ದಾರೆ. ತಮ್ಮ ಅಂಗಡಿ ಎದುರು ಅಳವಡಿಸಿರುವ ನಾಮಫಲಕದಲ್ಲಿ ಕನ್ನಡ ಪದಗಳನ್ನು ಚಿಕ್ಕದಾಗಿ ಬಳಸಲಾಗಿದೆ. ಬದಲಿಗೆ ಆಂಗ್ಲ ಭಾಷೆಯನ್ನು ದೊಡ್ಡದಾಗಿ ಮುದ್ರಿಸಿ ಮೆರೆಸುವ ಕೆಲಸ ಮಾಡಲಾಗುತ್ತಿದೆ. ಇದು ಕನ್ನಡ ವಿರೋಧಿ ನೀತಿಯನ್ನು ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡ ವಿರೋಧಿ ವ್ಯಾಪಾರಸ್ಥರಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ, ನಗರಸಭೆ, ಪುರಸಭೆ ಕ್ರಮ ವಹಿಸಬೇಕು. ನಾಮಫಲಕ ಹಾಗೂ ಜಾಹೀರಾತುಗಳಲ್ಲಿ ಕನ್ನಡಕ್ಕೆ ದೊಡ್ಡ ಸ್ಥಾನ ನೀಡದವರ ಪರವಾನಗಿಯನ್ನು ರದ್ದುಗೊಳಿಸಲಾಗುವುದೆಂದು ಎಚ್ಚರಿಕೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸೈನ್ಯದ ಅಧ್ಯಕ್ಷ ಬೇಕ್ರಿ ರಮೇಶ್, ಉಮ್ಮಡಹಳ್ಳಿ ನಾಗೇಶ್, ಭಗವಾನ್, ಕೆ.ಸಿ.ಯೋಗೇಶ್, ಹನುಮಂತು, ರಾಮು, ಸುನೀಲ್‌ಕುಮಾರ್ ಇತರರಿದ್ದರು.