

ಮೈಸೂರು
ಪ್ರಸ್ತುತ ದಿನಮಾನಗಳಲ್ಲಿ ಇಂಗ್ಲಿಷ್ ಕಲಿಕೆ ಮಹತ್ವ ಪಡೆದುಕೊಂಡಿದೆ ಎಂದು ಮೈಸೂರು ವಿವಿ ಕುಲಸಚಿವೆ ಎಂ.ಕೆ.ಸವಿತಾ ಹೇಳಿದರು
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಇಂಗ್ಲಿಷ್ ವಿಭಾಗ ಪ್ರಕಟಿಸಿರುವ 4 ಪಠ್ಯ ಪುಸ್ತಕಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸಿ ಮಾತನಾಡಿದರು. ಮಾತೃಭಾಷೆಯಾದ ಕನ್ನಡವನ್ನು ಪ್ರೀತಿಸಿ. ಅದರ ಜತೆಗೆ ಇಂಗ್ಲಿಷ್ ಭಾಷೆಯನ್ನೂ ಚೆನ್ನಾಗಿ ಕಲಿಯಿರಿ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಕನ್ನಡ ಮಾಧ್ಯಮದಲ್ಲಿ ಓದಿದ ನಾನು ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ವಿಷಯವನ್ನು ಚೆನ್ನಾಗಿ ಕಲಿತಿದ್ದರಿಂದ ಕೆಎಎಸ್ ಪರೀಕ್ಷೆ ಪಾಸ್ ಮಾಡಲು ಸಾಧ್ಯವಾಯಿತು. ನೀವು ಕೂಡ ಇಂಗ್ಲಿಷ್ ಭಾಷೆ ಕಲಿತರೆ, ಸಂವಹನ ಕೌಶಲ ಚೆನ್ನಾಗಿದ್ದರೆ ಉದ್ಯೋಗಾವಕಾಶ ದೊರಕುತ್ತದೆ ಎಂದು ಹೇಳಿದರು.
ಸದಾ ಮೊಬೈಲ್ ಫೊನಿನಲ್ಲಿ ಮುಳುಗಿದ್ದರೆ ಅದರಲ್ಲಿಯೇ ಕೆಲಸ ಹುಡುಕಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಇಂಗ್ಲಿಷ್ ದಿನ ಪತ್ರಿಕೆಗಳನ್ನು ಓದಿ, ರೇಡಿಯೋದಲ್ಲಿ ಇಂಗ್ಲಿಷ್ ವಾರ್ತೆಗಳನ್ನು ಆಲಿಸಿ, ಟಿವಿಗಳಲ್ಲಿ ಇಂಗ್ಲಿಷ್ ಚರ್ಚೆಗಳನ್ನು ಗಮನಿಸಿ, ಇದರಿಂದ ಭಾಷಾ ಜ್ಞಾನ ಹೆಚ್ಚುತ್ತದೆ ಎಂದರು.
ಕಠಿಣ ಪರಿಶ್ರಮದ ಮುಂದೆ ಯಾವುದೂ ಇಲ್ಲ. ಚೆನ್ನಾಗಿ ಅಧ್ಯಯನ ಮಾಡಿದರೆ ಯಾವುದೇ ಪರೀಕ್ಷೆಯನ್ನಾದರೂ ಪಾಸ್ ಮಾಡಬಹುದು ಎಂದು ಸವಿತಾ ಹೇಳಿದರು.
ಇವತ್ತು ಎಲ್ಲೆಡೆ ಮಹಿಳಾ ದಿನ ಆಚರಿಸಲಾಗುತ್ತದೆ. ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಲಾಗುತ್ತದೆ. ಮಹಿಳೆಯರು ಮೊದಲು ಕೀಳರಿಮೆಯನ್ನು ಬಿಡಬೇಕು. ಆತ್ಮವಿಶ್ವಾಸ ಮತ್ತು ಜ್ಞಾನ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ಸವಿತಾ ಹೇಳಿದರು.
ಮೈವಿವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ.ರಮೇಶ್ ಜಯರಾಮಯ್ಯ, ನಿವೃತ್ತ ಪ್ರಾಂಶುಪಾಲೆ ಡಾ.ಎಂ. ಪೂರ್ಣಿಮಾ, ಪ್ರಾಂಶುಪಾಲ ಪ್ರೊ.ಅಬ್ದುಲ್ ರೆಹಮಾನ್, ಶೈಕ್ಷಣಿಕ ಡೀನ್ ಡಾ.ಎಚ್.ಆರ್.ಶ್ರೀಪಾದ್, ಐಕ್ಯೂಎಸಿ ಸಂಚಾಲಕ ಡಾ.ವಿ.ನಂದಕುಮಾರ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗೋವಿಂದರಾಜು, ಸಹ ಪ್ರಾಧ್ಯಾಪಕ ವಿ.ಆರ್. ರಮೇಶ್ ಬಾಬು, ಡಾ.ಜಿ. ಪರಶುರಾಮಮೂರ್ತಿ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಇದ್ದರು.