

ಹಾಸನ: ಹಾಡಿನಲ್ಲಿ ಸಾಹಿತ್ಯ ಎಷ್ಟು ಮುಖ್ಯವೋ ಹಾಗೆಯೇ ಆಂಗ್ಲ ಭಾಷೆಗೆ ಮುಖ್ಯವಾಗಿ ಬೇಕಾಗುವುದು ವ್ಯಾಕರಣ ಎಂದು ಹಾಸನ ಹೇಮಾವತಿ ಜಲಾನಯನ ಪ್ರದೇಶ ವಿಶೇಷ ಭೂ ಸ್ವಾಧೀನಾಧಿಕಾರಿ ಡಾ.ವಿ. ಮಂಜುನಾಥ್ ಅಭಿಪ್ರಾಯಪಟ್ಟರು.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು- ಸ್ವಾಯತ್ತ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ರೂಸಾ ಫಂಡೆಡ್ ಬ್ರಿಡ್ಜ್ ಕೋರ್ಸ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ನಾವು ತೊಡುವ ಉಡುಗೆ ಸಂಸ್ಕಾರವನ್ನು ನೀಡುವುದಿಲ್ಲ. ಜ್ಞಾನದಿಂದ ಮಾತ್ರ ಎಲ್ಲವೂ ಸಾಧ್ಯ. ಯಾವ ವಿಷಯವಾದರೂ ನಾಚಿಕೆ ಸ್ವಭಾವವನ್ನು ಬಿಟ್ಟು ಧೈರ್ಯದಿಂದ ಮುನ್ನುಗ್ಗಬೇಕು ಎಂದು ಕರೆ ನೀಡಿದರು.
ಸೃಜನಾತ್ಮಕ ವಿಷಯಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ನಕಾರಾತ್ಮಕ ಧೋರಣೆಯಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಸಕಾರಾತ್ಮಕತೆ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ದೇಶದ ರಕ್ಷಣೆಗೆ 27 ವರ್ಷ ದುಡಿದ ಹೆಮ್ಮೆ ನನಗಿದೆ. ವಿವಿಧ ದೇಶಗಳನ್ನು ಸುತ್ತಿ, ಭಾಷೆಯನ್ನು ಕಲಿತರೆ ಉನ್ನತ ಮಟ್ಟಕ್ಕೆ ಏರಬಹುದು. ಇಂದು ನೇವಿ ಮತ್ತು ಎಚ್‌ಎಲ್‌ಗಳಲ್ಲಿ 12 ವಿಭಾಗಗಳಲ್ಲಿ ಉದ್ಯೋಗಾವಕಾಶಗಳಿವೆ. ಅದನ್ನು ಯುವಜನತೆ ಮನಗಾಣಬೇಕು ಹಾಗೂ ಅವಕಾಶ ಬಳಸಿಕೊಳ್ಳಬೇಕು. ಅದಕ್ಕೆ ಬೇಕಾಗಿರುವುದು ಸತತ ಪರಿಶ್ರಮ ಎಂದರು ಹೇಳಿದರು. ಲಾಂಗ್ವೇಜ್ ಮತ್ತು ಲಿಟರೇಚರ್ ನಡುವಿನ ವ್ಯತ್ಯಾಸವನ್ನು ತಿಳಿಸುವುದರ ಮೂಲಕ ಎಲ್ಲರ ಗಮನ ಸೆಳೆದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಎಂ.ಬಿ. ಇರ್ಷಾದ್ ಮಾತನಾಡಿ, ನಮ್ಮನ್ನು ನಾವು ಹಾಗೂ ಪ್ರಪಂಚವನ್ನು ಅರ್ಥ ಮಾಡಿಕೊಳ್ಳಲು ಭಾಷೆ ಕೊಂಡಿಯಾಗಿರುತ್ತದೆ. ಸ್ಪರ್ಧಾತ್ಮ ಪರೀಕ್ಷೆಯನ್ನು ಎದುರಿಸಲು ಆಂಗ್ಲ ಭಾಷೆಯ ಅತ್ಯಗತ್ಯವಾಗಿದೆ. ಇಂದು ಉದ್ಯೋಗಕ್ಕಾಗಿ ನಾವು ಪದವಿಯನ್ನು ಓದುತ್ತಿದ್ದೇವೆ. ಜೀವನ ನಡೆಸಲು ಬೇಕಾಗುವ ಕೌಶಲವನ್ನು ಮೊದಲು ಕಲಿಯಬೇಕು ಎಂದು ಹೇಳುವ ಮೂಲಕ ಬ್ರಿಡ್ಜ್ ಕೋರ್ಸ್‌ನ ಪ್ರಮುಖ ಅಂಶಗಳನ್ನು ವಿವರಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಶೈಕ್ಷಣಿಕ ಡೀನ್ ಡಿ.ಎಸ್.ರಾಜು ಮಾತನಾಡಿ, ಕಾಲೇಜು ಒಂದು ವಿಶ್ವವಿದ್ಯಾನಿಲಯದ ರೀತಿ ಕಾರ್ಯಚಟುವಟಿಕೆಗಳನ್ನು ಮಾಡುತ್ತಿದೆ. ಆಂತರಿಕ ಶಕ್ತಿ ಬಳಕೆ ಮಾಡಿಕೊಳ್ಳುವ ಶಕ್ತಿಯಾಗಿ ಬದಲಾಯಿಸಲು ಈ ರೀತಿಯ ಸೇತಬಂಧ ಕೋರ್ಸ್‌ಗಳು ಅನುಕೂಲವಾಗಲಿದೆ. ರೂಸಾದಿಂದ ಈ ಕಾರ್ಯಕ್ರಮಗಳಿಗೆ 5 ಕೋಟಿ ರೂ. ಕಾಲೇಜಿಗೆ ನೀಡಲಾಗಿದೆ. ಕಾರವಾರ, ಬಳ್ಳಾರಿ, ಮಂಡ್ಯ ಮತ್ತು ಹಾಸನದ ನಮ್ಮ ಕಾಲೇಜಿಗೆ ರೂಸಾ ಅನುದಾನವನ್ನು ನೀಡಿದೆ. ಕಾಲೇಜಿಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಾಗಿರುವುದರಿಂದ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೂಸಾ ಕೋ-ಆರ್ಡಿನೇಟರ್ ಡಾ.ಕೆ.ಎಸ್. ದಿನೇಶ್, ಪರೀಕ್ಷಾ ನಿಯಂತ್ರಕ ಡಾ.ಕೆ.ಡಿ. ಮುರಳೀಧರ್, ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ. ಸತ್ಯಮೂರ್ತಿ, ಹಾಸನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಎಲ್. ತಿಮ್ಮೇಶ್, ಬಿ.ಆರ್. ರಮೇಶ್, ಪ್ರಾಧ್ಯಾಪಕ ಕೆ.ಎನ್. ಸಹಾಯಕ ಪ್ರಾಧ್ಯಾಪಕರಾದ ರಮೇಶ್, ಜೆ. ಶಿವರಾಜ್‌ಕುಮಾರ್ ಸೇರಿದಂತೆ ಎಲ್ಲಾ ವಿಭಾಗದ ಪ್ರಾಧ್ಯಾಪಕರು ಹಾಜರಿದ್ದರು.