

ಮೈಸೂರು: ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ಕನ್ನಡದೊಂದಿಗೆ ಇಂಗ್ಲಿಷ್ ಭಾಷಾ ಕಲಿಕೆಯೂ ಅಗತ್ಯ ಎಂದು ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ನಿವೃತ್ತ ನಿರ್ದೇಶಕ ಪ್ರೊ.ಎಸ್. ಶಿವರಾಜಪ್ಪ ಹೇಳಿದರು.
ಜ್ಞಾನಬುತ್ತಿ ಸಂಸ್ಥೆಯಿಂದ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಉಚಿತ ಇಂಗ್ಲಿಷ್ ಕಲಿಕಾ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ಹಿಂದೆ ಮಾತೃಭಾಷೆ ಮೂಲಕ ನಮ್ಮತನ ರೂಪಿಸಿಕೊಳ್ಳುತ್ತಿದ್ದೆವು. ಪ್ರತಿ ಕೆಲಸವೂ ಮಾತೃಭಾಷೆಯಲ್ಲೇ ನಡೆಯುತ್ತಿತ್ತು. ಆದರೆ ಇಂದಿನ ಒತ್ತಡದ ಜೀವನದಲ್ಲಿ ಒಬ್ಬರು ಮತ್ತೊಬ್ಬರ ವಿರುದ್ಧ ಸ್ಪರ್ಧಿಸುವ ಹಾಗೂ ಮೀರಿ ನಿಲ್ಲುವ ತವಕದಲ್ಲಿ ಅರಿಯದೆ ಇಂಗ್ಲಿಷ್ ಭಾಷೆಯ ದಾಸರಾಗುತ್ತಿದ್ದೇವೆ. ಹೀಗಾಗಿ ಜ್ಞಾನವೃದ್ಧಿಗೆ ಇಂಗ್ಲಿಷ್ ಇಂದು ಅಗತ್ಯವಾಗಿದೆ ಎಂದು ಹೇಳಿದರು.
ಮಹಾರಾಣಿ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ.ಗೋವಿಂದರಾಜು ಮಾತನಾಡಿ, ಕರ್ನಾಟಕದಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ದೊರೆ ಯಬೇಕು. ಆದರೆ, ಎಲ್ಲ ದೇಶದ ಹಾಗೂ ಪ್ರತಿ ವಿಷಯವನ್ನು ಕನ್ನಡ ಭಾಷೆಯ ಮೂಲಕವೇ ಅರಿಯುವ ವಾತಾವರಣ ಈಗಿಲ್ಲ. ದೇಶ, ವಿದೇಶಗಳ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು, ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಎದುರಿಸಲು ಇಂಗ್ಲಿಷ್ ಭಾಷಾ ಜ್ಞಾನ, ಕಲಿಕೆ ಅನಿವಾರ್ಯವಾಗಿದೆ. ಅದರಲ್ಲೂ ಜಾಗತೀಕರಣದ ದಿನಗಳಲ್ಲಿ ಇಂಗ್ಲಿಷ್ ಪ್ರತಿಯೊಬ್ಬರ ಏಳಿಗೆಗೂ ಮಾನದಂಡ ಎನಿಸಿದೆ. ಈ ನಿಟ್ಟಿನಲ್ಲಿ ಜ್ಞಾನಬುತ್ತಿ ಸಂಸ್ಥೆ ಹಮ್ಮಿಕೊಂಡಿರುವ ಇಂಗ್ಲಿಷ್ ಕಲಿಕಾ ತರಬೇತಿ ಶಿಬಿರ ಉಪಯುಕ್ತವಾಗಿದೆ ಎಂದು ಅವರು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಬನ್ನೂರು ದೇವಪ್ರಸಾದ್ ಅವರನ್ನು ಅಭಿನಂದಿಸಲಾಯಿತು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಂಯೋಜಕ ಕೆ.ವೈ.ನಾಗೇಂದ್ರ ಇದ್ದರು.