

ಮಂಗಳೂರು: ಕಳೆದ 2 ದಿನಗಳಿಂದ ಕರಾವಳಿಯಲ್ಲಿ ಮುಂಗಾರು ಚುರುಕಾಗಿದ್ದು, ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಣೆಯಾಗಿದ್ದರೂ ಸಾಧಾರಣ ಮಳೆಯಾಗಿತ್ತು. ಭಾರತೀಯ ಹವಾಮಾನ ಇಲಾಖೆ ಸೆ.26ರಂದು ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.
ದ.ಕ.ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಅಲ್ಲಲ್ಲಿ ಹನಿಹನಿ ಮಳೆಯಾಗಿದ್ದು, ಬುಧವಾರ ಬೆಳಗ್ಗೆ ಅಲ್ಲಲ್ಲಿ ಜಿಟಿಜಿಟಿ ಮಳೆಯಾಗಿತ್ತು. ಬುಧವಾರ ದಿನಪೂರ್ತಿ ಕರಾವಳಿಯಲ್ಲಿ ಮೋಡಕವಿದ ವಾತಾವರಣ ಕಂಡುಬಂದಿದ್ದು, ಸಂಜೆ ವೇಳೆಗೆ ಮತ್ತೆ ಸಣ್ಣ ಪ್ರಮಾಣದಲ್ಲಿ ಮಳೆ ಕಾಣಿಸಿತ್ತು. ಜಿಲ್ಲೆಯಲ್ಲಿ ಗರಿಷ್ಠ 28.7 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ದ.ಕ.ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನ ವರೆಗೆ ಉಳ್ಳಾಲದಲ್ಲಿ ಗರಿಷ್ಠ 37.1 ಮಿಲಿ ಮೀಟರ್ ಮಳೆಯಾಗಿದೆ. ಜಿಲ್ಲೆಯ ಸರಾಸರಿ ಮಳೆ 38 ಮಿ.ಮೀ. ಆಗಿದೆ. ಬೆಳ್ತಂಗಡಿ 23.4 ಮಿ.ಮೀ, ಬಂಟ್ವಾಳ 24.8 ಮಿ.ಮೀ, ಮಂಗಳೂರು 35.9 ಮಿ.ಮೀ, ಪುತ್ತೂರು 31 ಮಿ.ಮೀ, ಸುಳ್ಯ 20.7 ಮಿ.ಮೀ, ಮೂಡುಬಿದಿರೆ 29.9 ಮಿ.ಮೀ, ಕಡಬ 20.2 ಮಿ.ಮೀ. ಮಳೆ ದಾಖಲಾಗಿದೆ.
ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಮಳೆಯ ಮುನ್ಸೂಚೆನೆ ಇದೆ. ಅರಬ್ಬಿ ಸಮುದ್ರದಲ್ಲಿ ಗಾಳಿ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದ್ದು, ಅದರ ಪ್ರಭಾವ ಮುಂದಿನ 3-4 ದಿನದ ನಂತರ ಗುಡುಗು, ಮಿಂಚು ಮತ್ತು ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.