

ಬೆಳಗಾವಿ: ಇ-ಹಾಜರಾತಿ ಆಧಾರದ ಮೇಲೆ ಗೌರವಧನ ನೀಡುತ್ತಿರುವುದನ್ನು ಕೂಡಲೇ ಕೈಬಿಡಬೇಕು ಎಂಬ ಬೇಡಿಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸೋಮವಾರ ನಗರದ ಜಿಪಂ ಕಚೇರಿ ಆವರಣದಲ್ಲಿ ನವ ಕರ್ನಾಟಕ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ನೇತೃತ್ವದಲ್ಲಿ ಅಂಗವಿಕಲರು ಪ್ರತಿಭಟನೆ ನಡೆಸಿದರು. ಬಳಿಕ ಜಿಪಂ ಸಿಇಒ ರಾಹುಲ ಶಿಂಧೆ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಗ್ರಾಪಂಗಳಲ್ಲಿ ಗೌರವಧನ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಅಂಗವಿಕಲ ಸಿಬ್ಬಂದಿಗೆ ಇ-ಹಾಜರಾತಿ ಕಡ್ಡಾಯಗೊಳಿಸಲಾಗಿದೆ. ಗೌರವಧನ ಕಾರ್ಯಕರ್ತರಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು. ಇಲಾಖೆಯಿಂದ ನೀಡುವ ಯಂತ್ರಚಾಲಿತ ವಾಹನಕ್ಕಾಗಿ ಅರ್ಜಿ ಸಲ್ಲಿಸಿರುವ ಕಾರ್ಯಕರ್ತರಿಗೆ ಪ್ರಥಮಾದ್ಯತೆ ಮೇರೆಗೆ ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ಹೊಸದಾಗಿ ಸೃಜನೆಯಾಗಿರುವ ಗ್ರಾಪಂ ಹಾಗೂ ತಾಪಂಗಳಲ್ಲಿ ಪ್ರಭಾರವಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರಿಗೆ ಸರ್ಕಾರದ ಆದೇಶದ ಪ್ರಕಾರ ಶೇ.50ರಷ್ಟು ಪ್ರಭಾರ ಭತ್ಯೆ ನೀಡಬೇಕು. ಹೆಚ್ಚುವರಿ ಕೆಲಸಕ್ಕೆ ವಿಶೇಷ ಭತ್ಯ ನೀಡಬೇಕು. ಅಲ್ಲದೆ, ಅಂಗವಿಕಲರಿಗಾಗಿ ವಿವಿಧ ಇಲಾಖೆಗಳಲ್ಲಿ ಮೀಸಲಾಗಿರುವ ಶೇ.5ರಷ್ಟು ಅನುದಾನವನ್ನು ಅಂಗವಿಕಲರ ಕಲ್ಯಾಣ ಕಾರ್ಯಕ್ರಮಕ್ಕೆ ಬಳಕೆಯಾಗಬೇಕು. ಇದಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ಅಂಬಾಜಿ ಮೇಟಿ, ದತ್ತಾತ್ರೇಯ ಕುಡಕಿ, ಫಕೀರಗೌಡ ಪಾಟೀಲ ಇತರರಿದ್ದರು.