ಇ- ಸಂಜೀವಿನಿ ಬಳಸಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯಿರಿ

DHO Dr Rajshekar Mali
Published on

ಕಲಬುರಗಿ: ಸಾಮಾನ್ಯ ಕೆಮ್ಮು, ನೆಗಡಿ, ಜ್ವರ ಮತ್ತು ಇತರೆ ರೋಗಗಳಿಂದ ಬಳಲುತ್ತಿದ್ದರೆ ಆಸ್ಪತ್ರೆಗೆ ತೆರಳಲು ಸಾಧ್ಯವಾಗುತ್ತಿಲ್ಲವೇ? ಚಿಂತಿಸದಿರಿ, ಮೊಬೈಲ್ನಲ್ಲಿಯೇ ವೈದ್ಯರು ನಿಮಗೆ ಚಿಕಿತ್ಸೆ ನೀಡುತ್ತಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ ತಿಳಿಸಿದ್ದಾರೆ.
ವಿಡಿಯೋ ಮೂಲಕ ವೈದ್ಯರನ್ನು ಮೊಬೈಲ್ನಲ್ಲಿ ಸಂಪರ್ಕಿಸಲು ನೀವು ಮಾಡಬೇಕಾಗಿರುವುದು ಇಷ್ಟೇ, ನಿಮ್ಮ ಮೊಬೈಲ್ನ ಪ್ಲೇ ಸ್ಟೋರ್ನಲ್ಲಿ ಇ-ಸಂಜೀವಿನಿ ಒಪಿಡಿ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಅಥವಾ ಗೂಗಲ್ನಲ್ಲಿ ಇ ಸಂಜೀವಿನಿ ಒಪಿಡಿ ಎಂದು ನಮೂದಿಸಿ, ರಿಜಿಸ್ಟರ್ ಆಗಬೇಕು. ವೆಬ್ ವಿಡಿಯೋ ಮೂಲಕ ಸಂಪರ್ಕಕ್ಕೆ ಬರುವ ವೈದ್ಯರು ನಿಮ್ಮ ಕಾಯಿಲೆ ಕುರಿತು ವಿವರವಾಗಿ ವಿಚಾರಣೆ ನಡೆಸಿ ಕಾಯಿಲೆಗೆ ಚಿಕಿತ್ಸೆ ಬರೆದುಕೊಡಲಿದ್ದಾರೆ. ಆ ಮೂಲಕ ಆಸ್ಪತ್ರೆಯ ಕದ ತಟ್ಟದೇ, ತಾವು ಇರುವಲ್ಲಿಂದಲೇ ರೋಗಕ್ಕೆ ಚಿಕಿತ್ಸೆ ಪಡೆಯಬಹುದಾಗಿದೆ.

ಏನಿದು ಇ ಸಂಜೀವಿನಿ?
ಕರೊನಾ ತಡೆಗಟ್ಟುವ ಸಲುವಾಗಿ ಸರ್ಕಾರ ಸಾರ್ವಜನಿಕರಿಗೆ ಮನೆಯಲ್ಲಿಯೇ ಇದ್ದು ಸುರಕ್ಷಿತವಾಗಿರಿ ಎಂದು ಮನವಿ ಮಾಡಿಕೊಳ್ಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಆರೋಗ್ಯದ ತೊಂದರೆಗಳಿಗೆ ಮನೆಯಲ್ಲಿ ಕುಳಿತು ಚಿಕಿತ್ಸೆ ಪಡೆಯಲು ಕೇಂದ್ರ ಆರೋಗ್ಯ ಮಂತ್ರಾಲಯ, ರಾಷ್ಟ್ರೀಯ ಟೆಲಿ ಸಮಾಲೋಚನಾ ಸೇವೆ (ನ್ಯಾಷನಲ್ ಟೆಲಿ ಕನ್ಸಲ್ಟೇಷನ್ ಸರ್ವಿಸ್) ಎಂಬ ಹೆಸರಿನಲ್ಲಿ ಲಿಂಕ್ ಆ್ಯಪ್ ಸಿದ್ದಪಡಿಸಿದೆ.
ಟೆಲಿ ಸಮಾಲೋಚನಾ ಸೇವೆ ಪಡೆಯಲು, ಮೊಬೈಲ್ನ ಪ್ಲೇ ಸ್ಟೋರ್ನಲ್ಲಿ ಅಥವಾ ಕಂಪ್ಯೂಟರ್ನ ಗೂಗಲ್ನಲ್ಲಿ ಇ ಸಂಜೀವಿನಿ ಒಪಿಡಿ ಎಂಬುದಾಗಿ ನಮೂದಿಸಬೇಕು. ಆಗ ನಿಮಗೊಂದು ಕೇಂದ್ರ ಆರೋಗ್ಯ ಸಚಿವಾಲಯದ ಮುಖಪುಟ ತೆರೆದುಕೊಳ್ಳಲಿದೆ. ಇದರಲ್ಲಿ ಪೇಷೆಂಟ್ ರಿಜಿಸ್ಟ್ರೇಷನ್ನಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿದರೆ, ನಿಮಗೊಂದು ಒ.ಟಿ.ಪಿ ಸಂಖ್ಯೆ ಬರಲಿದೆ. ಆ ಒ.ಟಿ.ಪಿ ಸಂಖ್ಯೆಯನ್ನು ನಮೂದಿಸಿದರೆ, ರಿಜಿಸ್ಟ್ರೇಷನ್ ಅಪ್ಲಿಕೇಷನ್ ತೆರೆದುಕೊಳ್ಳತ್ತದೆ. ಅದರಲ್ಲಿ ರೋಗಿಯ ಹೆಸರು, ಲಿಂಗ, ವಯಸ್ಸು ಮೊಬೈಲ್ ನಂಬರ್, ವಿಳಾಸವನ್ನು ನಮೂದಿಸಿ ಲಾಗಿನ್ ಆಗಬೇಕು. ಈ ವೇಳೆ ನಿಮಗೊಂದು ಟೋಕನ್ ನಂಬರ್ ಬರಲಿದೆ.

ಆ ಟೋಕನ್ ನಂಬರ್ ನೀಡಿ, ವೈದ್ಯರನ್ನು ವಿಡಿಯೋ ಕಾಲ್ ಮೂಲಕ ಸಂಪರ್ಕಿಸಬಹುದು. ಈ ಸೇವೆಯೂ ಪ್ರತಿ ದಿನದ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಲಭ್ಯವಿರುತ್ತದೆ. ಒಮ್ಮೆ ರಿಜಿಸ್ಟರ್ ಆದರೆ ಮತ್ತೆ ಆಗುವ ಅಗತ್ಯವಿಲ್ಲ. ವಿಡಿಯೋ ಕಾಲ್ ಮೂಲಕವೇ, ವೈದ್ಯರು ರೋಗಿಗಳೊಂದಿಗೆ ಸಮಾಲೋಚಿಸಿ ಚಿಕಿತ್ಸೆಗೆ ಔಷಧ ಬರೆದುಕೊಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net