ಇ ಮೆಗಾ ಲೋಕ ಅದಾಲತ್ ಸೆ. 19ರಿಂದ

29 Dwd 2
Published on

ಧಾರವಾಡ: ‘ಸರ್ವರಿಗೂ ಅವಕಾಶ ಎಲ್ಲರಿಗೂ ಒಂದೇ ನ್ಯಾಯ’ ಧ್ಯೇಯವಾಕ್ಯದೊಂದಿಗೆ ಸೆ. 19ರಿಂದ ದೇಶದಲ್ಲಿ ಪ್ರಥಮ ಭಾರಿಗೆ ರಾಜ್ಯದ ನ್ಯಾಯಾಲಯಗಳಲ್ಲಿ ಮೆಗಾ ಇ- ಲೋಕ ಅದಾಲತ್ ನಡೆಯಲಿದೆ ಎಂದು ಕಾರ್ಯಕಾರಿ ಅಧ್ಯಕ್ಷರು ಹಾಗೂ ಉಚ್ಛ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿ ಅರವಿಂದಕುಮಾರ್ ಅವರು ವಿಡಿಯೊ ಕಾನ್ಪರೆನ್ಸ್ ಮೂಲಕ ಮಾಹಿತಿ ನೀಡಿದರು.

ಶುಕ್ರವಾರ ಸಂಜೆ ಎಲ್ಲ ಜಿಲ್ಲೆಗಳ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಸದ್ಯಸ ಕಾರ್ಯದರ್ಶಿಗಳ ಜೊತೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿ ಕೋವಿಡ್ 19ರ ಸಮಯದಲ್ಲಿ ಮಾರ್ಗಸೂಚಿಗಳನ್ವಯ ಸೆ. 19ರಂದು ರಾಜ್ಯಾದ್ಯಂತ ಇ- ಮೆಗಾ ಲೋಕ ಆದಾಲತ್​ಗಳನ್ನು ಆಯೋಜಿಸುವಂತೆ ನಿರ್ದೇಶಿಸಿದರು.

ಕರೊನಾ ಅವಧಿಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ನ್ಯಾಯಾಲಯಗಳಲ್ಲಿ ಪಕ್ಷಗಾರರ ಪ್ರತ್ಯಕ್ಷ ಹಾಜರಿಯನ್ನು ನಿರ್ಬಂಧಿಸಲಾಗಿದೆ. ಲೋಕ ಅದಾಲತ್​ಗಳನ್ನು ವಿಡಿಯೋ ಕಾನ್ಪರೆನ್ಸ್ ಮುಖಾಂತರ ನಡೆಸುವಂತೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಮಾರ್ಗಸೂಚಿಗಳನ್ನು ನೀಡಿದೆ. ನ್ಯಾಯಾಧೀಶರು ನ್ಯಾಯಾಲಯದಲ್ಲಿರುವ ವಿಡಿಯೋ ಕಾನ್ಪರೆನ್ಸ್ ಮುಖಾಂತರ ಭಾಗವಹಿಸುತ್ತಾರೆ. ಅದೇರೀತಿ ಪಕ್ಷಗಾರರು ತಮ್ಮ ವಕೀಲರ ಕಚೇರಿಗಳ ಮುಖಾಂತರ ಅಥವಾ ವಿಸಿ ಮುಖಾಂತರ ಭಾಗವಹಿಸಬಹುದು ಎಂದರು.

ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಉಮೇಶ್ ಅಡಿಗ ಮಾತನಾಡಿ, ನ್ಯಾಯಾಲಯಗಳಲ್ಲಿ ಬಾಕಿ ಇರುವ ರಾಜಿ ಆಗಬಹುದಾದ ಎಲ್ಲ ಪ್ರಕರಣ ಹಾಗೂ ಮೋಟಾರ್ ವಾಹನ ಅಪಘಾತ ಪರಿಹಾರದ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು, ವಿದ್ಯುತ್ ಮಂಡಳಿ ಮುಂತಾದ ಸ್ಥಳೀಯ ಸಂಸ್ಥೆಗಳ ಪರ ಮತ್ತು ವಿರುದ್ಧದ ಪ್ರಕರಣಗಳು, ಬ್ಯಾಂಕ್​ಗಳಿಗೆ ಸಂಬಂಧಿಸಿದ ಪ್ರಕರಣಗಳು, ವೈವಾಹಿಕ ಅಥವಾ ಜೀವನಾಂಶ ಪ್ರಕರಣಗಳು, ಕಾನೂನಿನನ್ವಯ ರಾಜೀ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ಕಾರ್ವಿುಕ ನಷ್ಟ ಪರಿಹಾರ ಈ ಲೋಕ ಅದಾಲತ್​ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದರು.

ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಸುಮಾರು 20,000ಕ್ಕೂ ಹೆಚ್ಚು ಸಿವಿಲ್ ಪ್ರಕರಣಗಳು, ಸುಮಾರು 20,000ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಈಗಾಗಲೇ ಸುಮಾರು 3,500ಕ್ಕೂ ಹೆಚ್ಚು ಪ್ರಕರಣಗಳನ್ನು ಲೋಕ ಆದಾಲತ್ ಮುಖಾಂತರ ರಾಜೀ ಮಾಡಿಸಲು ಗುರುತಿಸಲಾಗಿದೆ. ಲೋಕ ಅದಾಲತ್​ಗಾಗಿ ನಗರದಲ್ಲಿ 13 ಪೀಠ, ಹುಬ್ಬಳ್ಳಿಯಲ್ಲಿ 18 ಪೀಠ ಹಾಗೂ ಕುಂದಗೋಳದಲ್ಲಿ 2, ಕಲಘಟಗಿ, ನವಲಗುಂದದಲ್ಲಿ ತಲಾ 1 ಪೀಠಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಬಾಕಿ ಪ್ರಕರಣಗಳು ಅಂತ್ಯ ಕಂಡು ಪಕ್ಷಗಾರರ ಸಮಯ ಮತ್ತು ಹಣ ಉಳಿತಾಯವಾಗುತ್ತದೆ. ಸಿವಿಲ್ ಪ್ರಕರಣಗಳಲ್ಲಿ ರಾಜಿಯಾದರೆ ನ್ಯಾಯಾಲಯಕ್ಕೆ ತುಂಬಿದ ಶುಲ್ಕ ಸಹ ವಾಪಸ್ ಆಗುತ್ತದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್. ಚಿಣ್ಣನ್ನವರ, ವಕೀಲರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net