ಇ-ಮಾರ್ಕೆಟ್ ಆ್ಯಪ್ ಕುರಿ ಸಾಕಣೆದಾರರಿಗೆ ಅನುಕೂಲ

2kglphoto1.
Published on

ಕೊಳ್ಳೇಗಾಲ: ಕುರಿ, ಮೇಕೆ, ಮತ್ತು ಹಸು ಸಾಕಣೆಯಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಜಿಲ್ಲಾ ಸಹಾಯಕ ನಿರ್ದೇಶಕ ಡಾ.ಮೂರ್ತಿ ಹೇಳಿದರು.


ಮೈಸೂರಿನ ಶ್ರೀಗಂಗಾ ಚಾರಿಟಬಲ್ ಟ್ರಸ್ಟ್, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ತಾಲೂಕಿನ ಕುರಿ, ಮೇಕೆ ರೈತ ಉತ್ಪಾದಕ ಕಂಪನಿ ಸಹಯೋಗದಲ್ಲಿ ಕುರಿ, ಮೇಕೆ ಮತ್ತು ಹಸು ಸಾಕಣೆ ಮಾಡುವ ಪುರುಷ ಮತ್ತು ಮಹಿಳೆಯರಿಗಾಗಿ ಪಟ್ಟಣದ ಗುರುಭವನದಲ್ಲಿ ಗುರುವಾರ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕುರಿ, ಮೇಕೆ, ಹಸು ಸಾಕಣೆಗೆ ಸರ್ಕಾರ ಸಾಕಷ್ಟು ಒತ್ತು ನೀಡಿದೆ. ಆದರೆ ನಮ್ಮಲ್ಲಿ ವ್ಯವಸ್ಥಿತವಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದರಿಂದ ಕುರಿಗಾರರಿಗೆ ತೊಂದರೆಯಾಗಿದೆ. ಪರಿಣಾಮ ದಲ್ಲಾಳಿಗಳ ಮೂಲಕ ಮಾರಾಟ ಮಾಡಲಾಗುತ್ತಿದ್ದು, ಅಧಿಕ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.


ಕುರಿ ಸಾಕಣೆ ಮಾಡುವವರಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದಾಗಿ ಇ-ಮಾರ್ಕೆಟ್ ಎಂಬ ಮೊಬೈಲ್ ಆ್ಯಪ್ ಅನುಷ್ಠಾನಗೊಳಿಸಿದ್ದು, ಕುರಿಗಾರರು ಇದರ ಮೂಲಕ ಮಾರಾಟ ಮಾಡಬಹುದು. ಗ್ರಾಹಕರು ಹಾಗೂ ಮಾರಾಟಗಾರರ ನೇರ ಸಂಪರ್ಕ ಬೆಸೆಯುವ ಈ ಆ್ಯಪ್‌ನಿಂದ ರೈತರಿಗೆ ಲಾಭವಾಗಲಿದೆ ಎಂದರು.


ಚಾರಿಟಬಲ್ ಟ್ರಸ್ಟ್ ಉಚಿತ ತರಬೇತಿ ನೀಡುತ್ತಿದ್ದು, ಇದರ ಸದುಪಯೋಗ ಪಡೆಯಬೇಕು. ಇದರಿಂದ ಅಗತ್ಯ ಮಾಹಿತಿ ಸಿಗಲಿದ್ದು, ನಿರ್ವಹಣೆ, ಆರೋಗ್ಯ ಹಾಗೂ ಸಾಕುವ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು ಎಂದು ಮಾಹಿತಿ ನೀಡಿದರು.


ಕುರಿ ಮತ್ತು ಮೇಕೆ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ರಾಚಯ್ಯ ಮಾತನಾಡಿ, ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧೆಡೆ ಟ್ರಸ್ಟ್ ವತಿಯಿಂದ ಉಚಿತ ತರಬೇತಿ ನೀಡುತ್ತಿರುವುದು ಒಳ್ಳೆಯ ಕೆಲಸ. ಮುಂದಿನ ದಿನದಲ್ಲಿ ಕೊಳ್ಳೇಗಾಲದಲ್ಲಿ ಬೃಹತ್ ಕುರಿ ಸಮಾವೇಶ ಆಯೋಜನೆ ಮಾಡಲಾಗುವುದು ಎಂದರು.


ಗಂಗಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಾಜ್‌ಕಾಮಯ್ಯ, ನಿರ್ದೇಶಕರಾದ ಎಂ.ದಿವ್ಯಾಶ್ರೀ, ಕೆ.ಕಾಮಯ್ಯ, ಎಸ್.ಬಿ. ಚಂದ್ರಶೇಖರ್, ಪಿ.ಶಿವರಾಮೇಗೌಡ, ಎಂ.ಮರಿಗೌಡ, ಉಮಾಶಂಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net