ಇ-ಬ್ಯಾಂಕ್​ ಖಾತರಿ ಪರಿಚಯಿಸಿದ ಕೆವಿಜಿಬಿ

3 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​ (ಕೆವಿಜಿಬಿ) ತನ್ನ ಗ್ರಾಹಕರಿಗೆ ಡಿಜಿಟಲ್​ ಮತ್ತು ಆನ್​ಲೈನ್​ ಬ್ಯಾಂಕಿಂಗ್​ ಸೇವೆಗಳನ್ನು ಪರಿಚಯಿಸುವಲ್ಲಿ ಮಂಚೂಣಿಯಲ್ಲಿದೆ. ಇದೀಗ ಬ್ಯಾಂಕ್​ ಸರ್ಕಾರದ ಮಾಹಿತಿ ಉಪಯುಕ್ತತೆ ಪೂರೈಕೆದಾರ ಸಂಸ್ಥೆ ರಾಷ್ಟ್ರೀಯ ಆಡಳಿತ ಸೇವೆಗಳ ನಿಗಮ ಜತೆಗೆ ಸೇರಿ ಇ-ಬ್ಯಾಂಕ್​ ಗ್ಯಾರಂಟಿ ಸೇವೆಯನ್ನು ಅಧಿಕೃತವಾಗಿ ಆರಂಭಿಸಿದೆ.

ನಗರದ ಬ್ಯಾಂಕ್​ ಪ್ರಧಾನ ಕಚೇರಿಯಲ್ಲಿ ಬ್ಯಾಂಕ್​ ಅಧ್ಯಕ್ಷ ಶ್ರೀಕಾಂತ ಭಂಡಿವಾಡ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​ ಇ-ಬ್ಯಾಂಕ್​ ಗ್ಯಾರಂಟಿ ಸೇವೆ ಆರಂಭಿಸಿದ ದೇಶದ ಮೊದಲ ಗ್ರಾಮೀಣ ಬ್ಯಾಂಕ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇ-ಬ್ಯಾಂಕ್​ ಗ್ಯಾರಂಟಿಯಿಂದ ಇನ್ನು ಮುಂದೆ ಇ-ಸಹಿ ಹಾಗೂ ಇ-ಸ್ಟಾಂಪ್​ಗಳ ಬಳಕೆಯಾಗಲಿದೆ ಎಂದರು.

ಇ-ಬ್ಯಾಂಕ್​ ಗ್ಯಾರಂಟಿ ಸೌಲಭ್ಯ ಪ್ರಕ್ರಿಯೆ ಇನ್ನಷ್ಟು ಸರಳವಾಗಲಿದ್ದು, ಇದರಿಂದ ಗ್ಯಾರಂಟಿ ನಿಡುವ ಪ್ರಕ್ರಿಯೆ ಕೆಲ ನಿಮಿಷಗಳಲ್ಲಿ ಮುಗಿಯಲಿದೆ. ಇ-ಬ್ಯಾಂಕ್​ ಗ್ಯಾರಂಟಿ ಬಿಡುಗಡೆ ಮಾಡಿದ ತಕ್ಷಣವೇ ಫಲಾನುಭವಿಗಳು ಎನ್​ಇಎಸ್​ಎಲ್​ ಪೋರ್ಟಲ್​ನಲ್ಲಿ ವೀಕ್ಷಿಸಬಹುದು. ಈ ವ್ಯವಸ್ಥೆ ಅನುಷ್ಠಾನದಿಂದ ಅರೆ ಪಟ್ಟಣ ಮತ್ತು ಗ್ರಾಮೀಣ ಭಾಗದ ಗ್ರಾಹಕರಿಗೆ ಅನುಕೂಲವಾಗಲಿದೆ. ಇದಲ್ಲದೆ ಬ್ಯಾಂಕ್​ ಖಾತರಿ ವಿಷಯದಲ್ಲಿ ಪಾರದರ್ಶಕತೆ ಹೆಚ್ಚಲಿದೆ ಎಂದರು.

2024-25ರ ಆರ್ಥಿಕ ವರ್ಷದಲ್ಲಿ ಬ್ಯಾಂಕ್​ ಉತ್ತಮ ಸಾಧನೆ ತೋರಿದೆ. 20,941 ಕೋಟಿ ರೂ. ಠೇವಣಿ ಮತ್ತು 17,573 ಕೋಟಿ ರೂ. ಮಂಗಡ ಮಟ್ಟ ತಲುಪುವ ಮೂಲಕ ಶೇ. 7.32 ಪ್ರಗತಿ ದರದ್ಲಲಿ 38,514 ಕೋಟಿ ರೂ. ವಹಿವಾಟು ದಾಖಲಿಸಿದೆ ಎಂದರು.

ಬ್ಯಾಂಕಿನ ಮಹಾ ಪ್ರಬಂಧಕ ಎಂ. ಪುನೀತ್​, ಆರ್​.ಟಿ. ಕಾಂಬಳೆ, ಸಹಾಯಕ ಮಹಾಪ್ರಬಂಧಕ ಉಲ್ಲಾಸ ಗುನಗಾ, ಮುಖ್ಯ ಪ್ರಬಂಧಕಿ ಅನುರಾಧ, ಹಿರಿಯ ಪ್ರಬಂಧಕ ನವೀನ ರೆಡ್ಡಿ, ಹಿರಿಯ ಅಧಿಕಾರಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net