

ಶ್ರೀಮಂಗಲ: ಇ-ಪ್ರಸಾದ ಹೆಸರಿನಲ್ಲಿ ತಲಕಾವೇರಿಯ ತೀರ್ಥ ಪ್ರಸಾದವನ್ನು 300 ರೂ. ಪಾವತಿಸಿದರೆ ಅಂಚೆ ಮುಖಾಂತರ ಮನೆ ಮನೆಗೆ ತಲುಪಿಸುವ ಯೋಜನೆಯನ್ನು ಕೊಡಗು ಜಿಲ್ಲಾಡಳಿತ ಕೂಡಲೇ ಸ್ಥಗಿತಗೊಳಿಸಬೇಕು ಎಂದು ತಿಂಗಕೊರ್ ಮೊಟ್ಟ್ ತಲಕಾವೇರಿಕ್ (ಕಾವೇರಿ ಭಕ್ತಾದಿಗಳ ಸಂಘ)ಕೂಟ ಒತ್ತಾಯಿಸಿದೆ.
ಲೋಕಕಲ್ಯಾಣಕ್ಕಾಗಿ ತೀರ್ಥರೂಪಿಣಿಯಾಗಿ ಕೊಡಗಿನ ಬ್ರಹ್ಮಗಿರಿ ತಪ್ಪಲಿನಲ್ಲಿ ಹುಟ್ಟಿ ಹರಿದು ಅರಬ್ಬಿ ಸಮುದ್ರವನ್ನು ಸೇರುವ, ಕೋಟ್ಯಂತರ ಜನರ ಬದುಕನ್ನೇ ಹಸನಾಗಿಸುವ ಕಾವೇರಿ ಮಾತೆಯ ತೀರ್ಥವನ್ನು ಇದೀಗ ಇ-ಪ್ರಸಾದ ಹೆಸರಿನಲ್ಲಿ ಜಿಲ್ಲಾಡಳಿತ ವ್ಯಾಪಾರಕ್ಕೆ ಬಳಸುತ್ತಿರುವುದು ವಿಷಾದನೀಯ ಎಂದು ತಿಂಗಕೋರ್ ಮೊಟ್ಟ್ ತಲಕಾವೇರಿಕ್ ಕೂಟದವರಾದ ತಲಕಾವೇರಿ, ಭಾಗಮಂಡಲ ಮೂಲ ತಕ್ಕ ಕುಟುಂಬದ ಮಂಡೀರ ರೋಷನ್, ಮಣವಟ್ಟಿರ ಅರುಣ್, ಪ್ರವೀಣ್, ಭಕ್ತಾದಿಗಳಾದ ಮಲ್ಲಪನೆರ ವಿನು ಚಿಣ್ಣಪ್ಪ, ಅಣ್ಣೀರ ಹರೀಶ್ ಮಾದಪ್ಪ, ಬಲ್ಲಣಮಾಡ ಲಿತೀನ್, ಚೊಟ್ಟೇಪಂಡ ಸ್ವಪ್ನ, ಶರತ್, ತೆನ್ನಿರ ಟೀನಾ, ಗಿರೀಶ್ ಚಂಗಪ್ಪ, ನೂರೇರ ಜೀವನ್ ಅಯ್ಯಪ್ಪ, ನಾಮೇರ ಯಜ್ನನವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾವೇರಿ ಮಾತೆಯ ಸ್ಥಳೀಯ ಭಕ್ತಾದಿಗಳ ಅಭಿಪ್ರಾಯ ಸಂಗ್ರಹಿಸದೆ, ಏಕಪಕ್ಷೀಯವಾಗಿ ಈ ಯೋಜನೆಯನ್ನು ದಿಢೀರ್ ಶುರು ಮಾಡಿರುವುದು ತಪ್ಪು ಎಂದಿರುವ ಕೂಟದ ಪ್ರಮುಖರು, ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ವಸ್ತ್ರಸಂಹಿತೆಯ ಬಗ್ಗೆ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಿ, ಕಾವೇರಿ ತೀರ್ಥ ಕುಂಡಿಕೆಗೆ ಹಿಂಬದಿ ಮುಖಾಂತರ ಹೋಗುವ ಬದಲು ಹಿಂದಿನ ಕಾಲದಿಂದಲೂ ನಡೆದು ಬಂದ ರೀತಿಯಲ್ಲಿ ತೀರ್ಥ ಕುಂಡಿಕೆಯ ಮುಂದಿನ ಭಾಗದಲ್ಲಿರುವ ಬ್ರಹ್ಮಕುಂಡಿಕೆಯ ಒಂದು ಬದಿಯಲ್ಲಿ ಹೋಗುವಂತೆ ಮಾಡಲಿ, ದೇವಸ್ಥಾನದ ಸುತ್ತಮುತ್ತ ಮಾಂಸ, ಮೀನಿನ ಅಂಗಡಿ ಇದ್ದು ಅದನ್ನು ತೆರವುಗೊಳಿಸುವ ಕೆಲಸ ಮಾಡಲಿ, ಇದರ ಬಗ್ಗೆ ಎರಡು ಮೂರು ಸಲ ಜಿಲ್ಲಾಡಳಿತಕ್ಕೆ ಮನವಿ ಕೊಟ್ಟರೂ ಯಾವುದೇ ರೀತಿಯಲ್ಲಿ ಸ್ಪಂದಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.