

ಹಾಸನ: ನಗರದ ಸಮೀಪ ಇರುವ ಸತ್ಯಮಂಗಲದ ಎಲೆಕ್ಟ್ರಾನಿಕ್ಸ್ ತ್ಯಾಜ್ಯ ದಾಸ್ತಾನು ಘಟಕಕ್ಕೆ ಉಪಯೋಗಿಸಿ ಹಾಳಾದ ಟಿವಿ, ಬಲ್ಬ್, ಮೊಬೈಲ್ ಮುಂತಾದ ಇ- ತ್ಯಾಜ್ಯವನ್ನು ಕೊಟ್ಟರೇ ಅನುಕೂಲವಾಗುತ್ತದೆ ಎಂದು ಆಕಾಶವಾಣಿ ಮುಖ್ಯಸ್ಥ ವಿಜಯ ಅಂಗಡಿ ಹೇಳಿದರು.
ನಗರದ ಸತ್ಯಮಂಗಲದಲ್ಲಿ ಕ್ಲಿಯರಿನ್ ಸಂಗ್ರಹಣ ಸಂಸ್ಥೆ, ಹಾಸನ ನಗರಸಭೆ ಮತ್ತು ಬೆಂಗಳೂರಿನ ಸಾಹಸ್ ಝೀರೋ ವೇಸ್ಟ್ ಸಂಸ್ಥೆಯ ಸಹಕಾರದೊಂದಿಗೆ ಹಾಸನದಲ್ಲಿ ಇ- ವೇಸ್ಟ್ ಸಂಗ್ರಹಣ ಕೇಂದ್ರಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ನಾಗರಿಕರು ಇ- ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಮರುಬಳಕೆಗಾಗಿ ಅಧಿಕೃತ ಕ್ಲಿಯರಿನ್ ಸಂಗ್ರಹಣ ಕೇಂದ್ರಕ್ಕೆ ತಲುಪಿಸಬೇಕೆಂದು ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡರು.
ಕ್ಲಿಯರಿನ್ ಸಂಸ್ಥೆಯ ಮುಖ್ಯಸ್ಥರಾದ ಚಂದ್ರಶೇಖರ್ ಮಾತನಾಡಿ, ಹಾಸನದ ಜನತೆ ಕ್ಲಿಯರಿನ್ ಸಂಸ್ಥೆಗೆ ಎಲ್ಲ ರೀತಿಯ ರಿಸೈಕಲ್ ಮಾಡಬಹುದಾದ ಘನ ತ್ಯಾಜ್ಯವನ್ನು ತಂದು ಕೊಡುಬಹುದಾಗಿ. ಸಮರ್ಪಕ ಇ- ತ್ಯಾಜ್ಯ ನಿರ್ವಹಣೆಯಿಂದ ಪರಿಸರಕ್ಕೆ ದೊಡ್ಡ ಕೊಡುಗೆ ಕೊಟ್ಟಂತಾಗುತ್ತದೆ ಮತ್ತು ಹಾಸನವನ್ನು ಸ್ವಚ್ಛ ನಗರ ಮತ್ತು ಸುಂದರ ನಗರವನ್ನಾಗಿ ಮಾಡುವಲ್ಲಿ ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಅಸಮರ್ಪಕ ಎಲೆಕ್ಟ್ರಾನಿಕ್ ತ್ಯಾಜ್ಯ ನಿರ್ವಹಣೆ ಪರಿಸರಕ್ಕೆ ದೊಡ್ಡ ಮಾರಕವಾಗಿ ಪರಿಣಮಿಸುತ್ತಿದೆ. ದಿನೇದಿನೆ ನಾವು ಬಳಸುತ್ತಿರುವ ಹಳೆಯ ಎಲೆಕ್ಟ್ರಾನಿಕ್ ವಸ್ತುಗಳು ತ್ಯಾಜ್ಯವಾಗಿ ಬಹುದೊಡ್ಡ ಮಾಲಿನ್ಯ ಉಂಟು ಮಾಡುತ್ತಿದೆ. ಅಲ್ಪ ಹಣದ ಆಸೆಗೆ ಗುಜರಿಗೆ ಕೊಡಲಾಗುತ್ತದೆ. ಆದರೆ, ಅಲ್ಲಿ ಇ- ತ್ಯಾಜ್ಯವನ್ನು ಆ್ಯಸಿಡ್ ಅಥವಾ ಬೆಂಕಿಯಿಂದ ಕರಗಿಸಿ ಅಸಮರ್ಪಕ ವಿಲೇವಾರಿ ಮಾಡುತ್ತಿದ್ದಾರೆ. ಈ ಸಮಸ್ಯೆಗೆ ಒಂದು ನಿರ್ದಿಷ್ಟ ಪರಿಹಾರ ಒದಗಿಸಲು ಹಾಸನದ ಪರಿಸರ ಆಧಾರಿತ ಕ್ಲಿಯರಿನ್ ಸಂಸ್ಥೆ ಸಾರ್ವಜನಿಕರಿಂದ ಇ-ತ್ಯಾಜ್ಯವನ್ನು ಸಂಗ್ರಹಿಸಲು ಮುಂದಾಗಿದೆ. ಅ. 14 ರಂದು ಅಂತಾರಾಷ್ಟ್ರೀಯ ಇ-ತ್ಯಾಜ್ಯ ದಿನಾಚರಣೆಯನ್ನಾಗಿ ಆಚರಿಸುವುದರ ಜತೆಗೆ ಇ-ತ್ಯಾಜ್ಯ ಸಂಗ್ರಹಣ ಕೇಂದ್ರಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಸಾಹಸ್ ಝೀರೋ ವೇಸ್ಟ್ ಸಂಸ್ಥೆಯ ರಾಜು, ಆಕಾಶವಾಣಿಯ ಲೋಕೇಶ್, ಗುತ್ತಿಗೆದಾರ ತಮ್ಮೇಗೌಡ, ವೇಣುಗೋಪಾಲ್ ಇತರರು ಉಪಸ್ಥಿತರಿದ್ದರು.