ಇ.ಡಿ. ದಾಳಿ ಖಂಡಿಸಿ ಪ್ರತಿಭಟನೆ

oppo_2
oppo_2
Published on

ಮದ್ದೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಶೈಕ್ಷಣಿಕ ಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರ ರಾಜಕೀಯ ಪ್ರೇರಿತವಾಗಿ ಇಡಿ ದಾಳಿ ನಡೆಸಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಜಿ.ಪರಮೇಶ್ವರ್ ಅವರ ರಾಜಕೀಯ ಉನ್ನತಿ ಸಹಿಸದ ಕೇಂದ್ರ ಸರ್ಕಾರ ಶೈಕ್ಷಣಿಕ ಸಂಸ್ಥೆಗಳ ಮೇಲೆ ರಾಜಕೀಯ ಪ್ರೇರಿತವಾಗಿ ಅನಗತ್ಯವಾಗಿ ಇಡಿ ದಾಳಿ ನಡೆಸಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ಅಧ್ಯಕ್ಷ ಕಂಠಿ ಸುರೇಶ್ ಮಾತನಾಡಿ, ಶೈಕ್ಷಣಿಕ ಸಂಸ್ಥೆಗಳ ಮೇಲೆ ಈಡಿ ದಾಳಿ ನಡೆಸಿರುವುದು ರಾಜಕೀಯ ಪ್ರೇರಿತವಾಗಿದೆ. 50 ವರ್ಷಗಳಿಂದ ವಿದ್ಯಾರ್ಥಿ ವಸತಿ ನಿಲಯ, ಮೆಡಿಕಲ್, ಇಂಜಿನಿಯರಿಂಗ್, ಡೆಂಟಲ್, ನರ್ಸಿಂಗ್, ಪಾಲಿಟೆಕ್ನಿಕ್ ಕಾಲೇಜು ಆರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಶ್ರಮಿಸುತ್ತಿದ್ದಾರೆ. ಈ ವಿಚಾರ ಕೇಂದ್ರ ಸರ್ಕಾರಕ್ಕೂ ಗೊತ್ತಿದ್ದರೂ ಇ.ಡಿ. ದಾಳಿ ನಡೆಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯ ಏಳಿಗೆ ಸಹಿಸದ ಹಾಗೂ ದಲಿತ ಸಮುದಾಯದ ಪ್ರಭಾವಿ ನಾಯಕರು ರಾಜ್ಯದ ಮುಖ್ಯಮಂತ್ರಿ ರೇಸ್‌ನಲ್ಲಿ ಡಾ.ಜಿ ಪರಮೇಶ್ವರ್ ಇರುವುದರಿಂದ ಅವರ ಒಡೆತನದ ಶೈಕ್ಷಣಿಕ ಸಂಸ್ಥೆಗಳ ಮೇಲೆ ರಾಜಕೀಯ ಪ್ರೇರಿತವಾಗಿ ದಾಳಿ ಮಾಡಿರುವುದು ಸರಿಯಲ್ಲ. ಕೂಡಲೇ ದಾಳಿ ನಿಲ್ಲಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಕೇಂದ್ರ ಸರ್ಕಾರ ವಿರುದ್ಧ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಡಾ ಸ್ಮಿತಾ ರಾಮು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ವನೀತಾ, ಸದಸ್ಯೆ ಪ್ರಮೀಳಾ, ಹಿಂದುಳಿದ ವರ್ಗಗಳ ಹಾಗೂ ಪಂಗಡಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹದೇವಯ್ಯ, ಮುಖಂಡರಾದ ಇಂತಿಯಾಜ್ ವುಲ್ಲಾಖಾನ್, ಹುಲಿಗೆರೆಪುರ ಮಹಾದೇವು, ರಾಜೇಂದ್ರ, ಭಾನುಪ್ರಕಾಶ್, ಅರುಣ್, ಪ್ರಸನ್ನ ಕುಮಾರ, ಗುರುಲಿಂಗಯ್ಯ, ಆತಗೂರು ಲಿಂಗಪ್ಪ, ಸಿದ್ದರಾಜು, ಪುಟ್ಟಯ್ಯ, ಮರಿದೇವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net