

ಸಂತೋಷ ವೈದ್ಯ ಹುಬ್ಬಳ್ಳಿ
ವಿಶಿಷ್ಟ ಕಲ್ಪನೆಯೊಂದಿಗೆ ರೂಪಿಸಲಾದ ಇ- ಟಾಯ್ಲೆಟ್ಗಳು ಶುರುವಾಗಿ ಎರಡು ವರ್ಷಗಳೇ ಕಳೆದಿವೆ. ಇದರ ಬಳಕೆಗೆ ಕನಿಷ್ಠ ಒಂದು ರೂಪಾಯಿ ದರ ನಿಗದಿಪಡಿಸಲಾಗಿದೆ. ಹೀಗಿದ್ದರೂ, ವಿವಿಧ ತಂತ್ರ ಬಳಸಿ ಪುಕ್ಕಟೆಯಾಗಿ ಉಪಯೋಗಿಸುವುದು ಮಾತ್ರ ನಿಂತಿಲ್ಲ. ಈ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಇವುಗಳ ನಿರ್ವಹಣೆಯನ್ನು ಸ್ಥಳೀಯರಿಗೆ ವಹಿಸಲು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಚಿಂತನೆ ನಡೆಸಿದೆ.
ನಗರದಲ್ಲಿ ವಿವಿಧೆಡೆ ಅಳವಡಿಸಿರುವ ಇ-ಟಾಯ್ಲೆಟ್ಗಳ ಒಟ್ಟು ಸಂಖ್ಯೆ 30. ಈ ಪೈಕಿ 15 ಇ-ಟಾಯ್ಲೆಟ್ಗಳು ಪಾಲಿಕೆಯ ಅಧೀನದಲ್ಲಿದ್ದು, ನಿರ್ವಹಣೆ ಸಹ ಪಾಲಿಕೆಯದ್ದೇ ಆಗಿದೆ. ಇನ್ನುಳಿದ 15 ಇ-ಟಾಯ್ಲೆಟ್ಗಳು ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ನ ಸುರ್ಪದಿಯಲ್ಲಿವೆ. ಇದರ ನಿರ್ವಹಣೆಯ ಗುತ್ತಿಗೆಯನ್ನು ಖಾಸಗಿಯವರಿಗೆ ನೀಡಲಾಗಿದೆ. ಈ ಗುತ್ತಿಗೆ ಅವಧಿ ಬರುವ ಮಾರ್ಚ್ ಕೊನೆಗೊಂಡ ಬಳಿಕ ಎಲ್ಲ 15 ಇ-ಟಾಯ್ಲೆಟ್ಗಳನ್ನು ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ನವರು ಪಾಲಿಕೆಗೆ ಹಸ್ತಾಂತರ ಮಾಡಲಿದ್ದಾರೆ.
ಏಪ್ರಿಲ್ನಿಂದ ಎಲ್ಲ 30 ಇ-ಟಾಯ್ಲೆಟ್ಗಳ ಹೊಣೆ ಪಾಲಿಕೆಯ ಹೆಗಲಿಗೆ ಬರಲಿದೆ. ಪ್ರತಿ ಇ-ಟಾಯ್ಲೆಟ್ ಅನ್ನು ವ್ಯಕ್ತಿ ಅಥವಾ ಸಂಘ ಸಂಸ್ಥೆಗಳ ಪ್ರತಿನಿಧಿಯೊಬ್ಬರಿಗೆ ಗುತ್ತಿಗೆ ಆಧಾರದಲ್ಲಿ ವಹಿಸಲು ಪಾಲಿಕೆ ಮುಂದಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಿರುವ ಇ-ಟಾಯ್ಲೆಟ್ಗಳ ದುರ್ಬಳಕೆ ಹೆಚ್ಚುತ್ತಿರುವುದರಿಂದ ಪಾಲಿಕೆ ಇಂಥದೊಂದು ಮಾರ್ಗ ಕಂಡುಕೊಂಡಿದೆ.
ಹೀಗಿದೆ ದುರ್ಬಳಕೆ: ನಾಣ್ಯ (1 ರೂ., 2ರೂ., ಅಥವಾ 5 ರೂ.) ಹಾಕಿದಾಗ ಸ್ವಯಂಚಾಲಿತವಾಗಿ ತೆರೆದುಕೊಳ್ಳುವ ಇ-ಟಾಯ್ಲೆಟ್ಗಳು ಇವು. ಸಾರ್ವಜನಿಕರು ವೈಸರ್, ನಾಣ್ಯದ ಆಕಾರದ ಕಬ್ಬಿಣ ತುಣುಕುಗಳನ್ನು ಉಪಯೋಗಿಸಿ ಬಳಕೆ ಮಾಡುತ್ತಿದ್ದಾರೆ. 1 ನಾಣ್ಯ ಹಾಕಿ ಬಾಗಿಲು ಪೂರ್ಣವಾಗಿ ಬಂದ್ ಮಾಡದೇ ಒಬ್ಬೊಬ್ಬರಾಗಿ ನಾಲ್ಕೈದು ಜನ ಟಾಯ್ಲೆಟ್ ಬಳಕೆ ಮಾಡುವುದು ಸಹ ಇಲ್ಲಿ ಸಾಮಾನ್ಯವಾಗಿದೆ. ಇ-ಟಾಯ್ಲೆಟ್ ನೋಡಿಕೊಳ್ಳಲು ಸ್ಥಳದಲ್ಲಿ ಯಾರೂ ಇಲ್ಲದೇ ಇರುವುದು ಈ ರೀತಿಯ ದುರ್ಬಳಕೆಗೆ ದಾರಿಯಾಗಿದೆ. ಇದನ್ನೆಲ್ಲ ತಪ್ಪಿಸಲೆಂದೇ ನಿರ್ವಹಣೆಯನ್ನು ಸ್ಥಳೀಯರಿಗೆ ವಹಿಸಲು ಪಾಲಿಕೆ ನಿರ್ಧರಿಸಿದೆ. ಸದ್ಯ ದುರ್ಬಳಕೆ ಅವ್ಯಾಹತವಾಗಿರುವುದರಿಂದ ಪ್ರತಿಯೊಂದು ಇ-ಟಾಯ್ಲೆಟ್ನಿಂದ ಮಾಸಿಕ ಸರಾಸರಿ 300ರಿಂದ 350 ರೂ. ಬಳಕೆದಾರರ ಶುಲ್ಕ ಸಂಗ್ರಹವಾಗುತ್ತಿದೆ. ಅಂದರೆ, ನಿತ್ಯ 10-12 ಜನ ಮಾತ್ರ ಬಳಕೆ ಮಾಡುತ್ತಿದ್ದಾರೆಂದು ಅರ್ಥ. ನಿರ್ವಹಣೆಗಾಗಿ ಸ್ಥಳದಲ್ಲಿ ಯಾರಾದರೂ ಇದ್ದಲ್ಲಿ ದುರ್ಬಳಕೆ ತಪ್ಪಿ ಬಳಕೆದಾರರ ಶುಲ್ಕ ಸಂಗ್ರಹದಲ್ಲಿ ಏರಿಕೆಯಾಗಲಿದೆ ಎಂಬುದು ಪಾಲಿಕೆಯ ಲೆಕ್ಕಾಚಾರ. ಸ್ಮಾರ್ಟ್ ಸಿಟಿ ಅಧೀನದಲ್ಲಿರುವ ಇ-ಟಾಯ್ಲೆಟ್ಗಳ ನಿರ್ವಹಣೆಯನ್ನು ಸಕಬಾಳ ಎಂಬುವವರಿಗೆ ವಾರ್ಷಿಕ 4.35 ಲಕ್ಷ ರೂ. ಗೆ ಗುತ್ತಿಗೆ ನೀಡಲಾಗಿದೆ. ಇವರ ಅವಧಿ ಇನ್ನು 3 ತಿಂಗಳ ಬಾಕಿ ಇದೆ. 2018 ನವೆಂಬರ್ 1ರಂದು ಹುಬ್ಬಳ್ಳಿಯಲ್ಲಿ ಮೊದಲ ಬಾರಿ 3 ಟಾಯ್ಲೆಟ್ಗಳು ಕಾರ್ಯಾರಂಭ ಮಾಡಿದ್ದವು. ಬಳಿಕ ಹಂತ ಹಂತವಾಗಿ ಉಳಿದವು ಕಾರ್ಯಾರಂಭ ಮಾಡಿವೆ. ಕೇರಳ ತಿರುವನಂತಪುರಂನ ಎರಮ್ ಸೈಂಟಿಫಿಕ್ ಸಲ್ಯೂಷನ್ಸ್ ಕಂಪನಿಯು ಇವನ್ನು ಅಳವಡಿಸಿ 1 ವರ್ಷ ನಿರ್ವಹಣೆ ಮಾಡಿತ್ತು. ಪ್ರತಿ ಇ-ಟಾಯ್ಲೆಟ್ ವೆಚ್ಚ 4.55 ಲಕ್ಷ ರೂ.
ಇಲ್ಲಿವೆ ಇ - ಶೌಚಾಲಯ: ಪಿ.ಬಿ. ರಸ್ತೆ , ಚಿಟಗುಪ್ಪಿ ಆಸ್ಪತ್ರೆ, ಮಹಿಳಾ ವಿದ್ಯಾಪೀಠದ ಎದುರು , ಇಂದಿರಾ ಗಾಜಿನ ಮನೆ ಹೊರಗೆ , ಗೋಕುಲ ರಸ್ತೆ ಕೆಇಸಿ ಎದುರು , ಜೆ.ಸಿ. ನಗರದ ಟೌನ್ ಹಾಲ್, ಉಣಕಲ್ ಉದ್ಯಾನ, ಗೋಕುಲ ರಸ್ತೆ ಮಂಜುನಾಥ ನಗರದಲ್ಲಿ ಇ-ಟಾಯ್ಲೆಟ್ ಅಳವಡಿಸಲಾಗಿದೆ. ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿರುವ 1 ಇ-ಟಾಯ್ಲೆಟ್ ಕಾರ್ಯನಿರ್ವಹಿಸುತ್ತಿಲ್ಲ. ಕೆಲವೆಡೆ ಒಂದೇ ಸ್ಥಳದಲ್ಲಿ 3- 4 ಇವೆ.
ಮಾರ್ಚ್ ಬಳಿಕ ಸ್ಮಾರ್ಟ್ ಸಿಟಿ ಲಿಮಿಟೆಡ್ನ ಅಧೀನದಲ್ಲಿರುವ ಇ-ಟಾಯ್ಲೆಟ್ಗಳು ನಮಗೆ ಹಸ್ತಾಂತರವಾಗಲಿವೆ. ಆಗ, ಒಟ್ಟು 30 ಇ-ಟಾಯ್ಲೆಟ್ಗಳ ನಿರ್ವಹಣೆಯನ್ನು ಗುತ್ತಿಗೆ ಆಧಾರದಲ್ಲಿ ಸ್ಥಳೀಯರಿಗೆ ವಹಿಸಿಕೊಡುವ ವಿಚಾರವಿದೆ. ದುರ್ಬಳಕೆಯನ್ನು ತಪ್ಪಿಸಲು ಪ್ರತಿ ಇ-ಟಾಯ್ಲೆಟ್ ಬಳಿ ಒಬ್ಬರು ಇರುವುದು ಸೂಕ್ತವೆಂದು ಭಾವಿಸಿದ್ದೇವೆ. ಈ ಸಂಬಂಧ ಸದ್ಯದಲ್ಲೇ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಲಿದ್ದೇವೆ. -- ಡಾ. ಸುರೇಶ ಇಟ್ನಾಳ, ಪಾಲಿಕೆ ಆಯುಕ್ತರು