ಇ-ಆಸ್ತಿಗೆ ಐದು ದಾಖಲೆಗಳು ಸಾಕು

h12-E-aashti
Published on

ಹುಬ್ಬಳ್ಳಿ: ಇ-ಆಸ್ತಿ ಸೃಜನೆಗೆ ಆಸ್ತಿ ಮಾಲೀಕರು ಅವಶ್ಯ ಐದು ದಾಖಲೆಗಳನ್ನು ನೀಡಿದರೆ ಸಾಕು. ಹನ್ನೊಂದು ದಾಖಲೆಗಳನ್ನು ನೀಡುವಂತೆ ಸಿಬ್ಬಂದಿ ಕಿರುಕುಳ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ)ಯು ಹುಬ್ಬಳ್ಳಿಯಲ್ಲಿ ಸೋಮವಾರ ಆಯೋಜಿಸಿದ್ದ ಇ-ಆಸ್ತಿ, ಟ್ರೇಡ್ ಲೈಸನ್ಸ್ ಹಾಗೂ ಆಸ್ತಿ ತೆರಿಗೆ ಕುರಿತ ತಿಳಿವಳಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಸ್ತಿ ಮಾಲೀಕರು ಆಧಾರ್ ಕಾರ್ಡ್, ಆಸ್ತಿ ತೆರಿಗೆ ಪಾವತಿ ಚಲನ್ ಪ್ರತಿ, ಪಾಸ್​ಪೋರ್ಟ್ ಸೈಜ್ ಭಾವಚಿತ್ರ, ನಿವೇಶನ ಅಥವಾ ಕಟ್ಟಡದ ಫೋಟೋ ಹಾಗೂ ಖರೀದಿ ಪತ್ರಗಳನ್ನು ನೀಡಿದರೆ ಇ-ಆಸ್ತಿ ಮಾಡಿಸಿಕೊಡಬೇಕು ಎಂದು ಸಿಬ್ಬಂದಿಗೆ ಸೂಚಿಸಿದ್ದೇನೆ ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿ 3.23 ಲಕ್ಷ ಆಸ್ತಿಗಳಿವೆ. ಇಲ್ಲಿಯವರೆಗೆ 35 ಸಾವಿರ ಮಾತ್ರ ಇ-ಆಸ್ತಿ ಸೃಜಿಸಲಾಗಿದೆ. ತಂತ್ರಾಂಶದ ಸರ್ವರ್ ಸಮಸ್ಯೆಯಿಂದಾಗಿ ಬಹುತೇಕ ಪ್ರಕರಣಗಳಲ್ಲಿ ಅರ್ಜಿ ಸಲ್ಲಿಸಿದ 7 ದಿನಗಳಲ್ಲಿ ಇ-ಆಸ್ತಿ ಸೃಜನೆ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನೂ ಒಂದೂವರೆ ತಿಂಗಳಲ್ಲಿ ತಂತ್ರಾಂಶದ ಸರ್ವರ್ ಅಪ್​ಗ್ರೇಡ್ ಆಗಲಿದ್ದು, ಆಗ ಕಾರ್ಯವಿಧಾನ ತ್ವರಿತವಾಗಿ ಆಗಲಿದೆ ಎಂದು ಹೇಳಿದರು.

ಮುಖ್ಯ ಲೆಕ್ಕಾಧಿಕಾರಿ ಸತೀಶ ನರಗಟ್ಟಿ, ಉಪ ಆಯುಕ್ತ (ಕಂದಾಯ) ಆನಂದ ಕಲ್ಲೋಳಿಕರ, ಮುಖ್ಯ ಆರೋಗ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ, ಕಂದಾಯ ಅಧಿಕಾರಿ, ವಿನಯಕುಮಾರ ಹೊಳೆಪ್ಪಗೋಳ ಇದ್ದರು. ಕೆಸಿಸಿಐ ಅಧ್ಯಕ್ಷ ವಿನಯ ಜವಳಿ ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಶಂಕರ ಕೋಳಿವಾಡ ವಂದಿಸಿದರು. ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net