

ಹುಬ್ಬಳ್ಳಿ: ತೆರಿಗೆದಾತ ಹಾಗೂ ಆದಾಯ ತೆರಿಗೆ ಇಲಾಖೆ ಮಧ್ಯೆ ಯಾವುದೇ ಮಧ್ಯವರ್ತಿ ಇಲ್ಲದಂತೆ ವ್ಯವಹರಿಸುವ ಇ- ಅಸೆಸ್ಸಮೆಂಟ್ನ್ನು ಒಪ್ಪಿಕೊಳ್ಳಬಹುದು ಆದರೆ, ಇ- ಅಪೀಲ್ ಸರಿಯಲ್ಲ. ಇದರಲ್ಲಿ ಸಾಕಷ್ಟು ಅಡೆತಡೆ, ಲೋಪದೋಷಗಳಿವೆ ಎಂದು ಖ್ಯಾತ ಲೆಕ್ಕಪರಿಶೋಧಕ, ಐಇಎಂಎಸ್ ಚೇರ್ಮನ್ ಡಾ. ಎನ್.ಎ. ಚರಂತಿಮಠ ಹೇಳಿದರು.
ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಇನ್ಸ್ಟಿಟ್ಯೂಟ್ ಆಪ್ ಎಕ್ಸಲ್ಲನ್ಸ್ ಇನ್ ಮ್ಯಾನೇಜಮೆಂಟ್ ಸೈನ್ಸ್ (ಐಇಎಂಎಸ್) ಸಹಯೋಗದೊಂದಿಗೆ ಬುಧವಾರ ಏರ್ಪಡಿಸಿದ್ದ ಕೇಂದ್ರ ಬಜೆಟ್ ವಿಶ್ಲೇಷಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇ- ಅಪೀಲ್ನಿಂದ ತೆರಿಗೆದಾತರಿಗೆ ಸಮಾಧಾನ ಸಿಗುವುದಿಲ್ಲ. ಇದರ ವಿರುದ್ಧ ಯಾರಾದರೂ ನ್ಯಾಯಾಲಯಕ್ಕೆ ಹೋದರೆ ಈ ವ್ಯವಸ್ಥೆ ಉಳಿಯುವುದಿಲ್ಲ. ಕೇಂದ್ರ ಸರ್ಕಾರ ಮೊದಲೇ ಎಚ್ಚೆತ್ತುಕೊಳ್ಳುವುದು ಒಳಿತು ಎಂದರು.
ಚಾರಿಟಬಲ್ ಟ್ರಸ್ಟ್ಗಳ ಕೇಂದ್ರೀಕೃತ ನೋಂದಣಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, ಹೊಸ ತೆರಿಗೆ ನಿಯಮಾವಳಿಯು ಉಳಿತಾಯ ಹಾಗೂ ಹೂಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಿದೆ. ಇದು ಮುಂದಿನ ದಿನಮಾನಗಳಲ್ಲಿ ಸಾಮಾಜಿಕ ಭದ್ರತೆ ಮೇಲೂ ದುಷ್ಪರಿಣಾಮ ಉಂಟು ಮಾಡಲಿದೆ ಎಂದರು.
ಕವಿವಿ ಅರ್ಥಶಾಸ್ತ್ರ ವಿಭಾಗದ ಡಾ. ಬಿ.ಎಚ್ ನಾಗೂರ ಮಾತನಾಡಿ, ಒಂದೆಡೆ ದೇಶದ ಅರ್ಥ ವ್ಯವಸ್ಥೆ ನಿಧಾನ ಗತಿಯಲ್ಲಿ ಸಾಗಿದೆ, ಇನ್ನೊಂದೆಡೆ ಹಣದುಬ್ಬರ ಪ್ರಮಾಣ ಇವೆರಡೂ ಆರ್ಥಿಕತೆ ಕುಂಠಿತಕ್ಕೆ ಕಾರಣವಾಗಿವೆ. ಇಂಥ ಸಂದರ್ಭದಲ್ಲಿ ಸರಿ ದಾರಿಗೆ ತರಲು ಹಾಗೂ ಒಂದಿಷ್ಟು ಸುಧಾರಣೆ ಮಾಡಲು ಬಜೆಟ್ ಮುಂದಡಿ ಇಟ್ಟಿದೆ ಎಂದರು.
ಮುಂದಿನ 5 ವರ್ಷದಲ್ಲಿ 100 ಲಕ್ಷ ಕೋಟಿ ರೂ. ಮೂಲ ಸೌಲಭ್ಯ ಅಭಿವೃದ್ಧಿಗೆ ಖರ್ಚು ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ, ಆ ಹಣ ಹೇಗೆ ಹೊಂದಿಸಲಾಗುತ್ತದೆ ಎಂಬ ವಿವರಣೆ ಇಲ್ಲ. ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ. ಇದರಿಂದ ರೈತರ ಆದಾಯ ದ್ವಿಗುಣವಾಗುವ ನಿರೀಕ್ಷೆ ಇದೆ. ಆದರೆ, ಗ್ರಾಮೀಣಾಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ ಎಂದರು. ಇಂಜಿನಿಯರಿಂಗ್ ಸೇರಿ ಶೇ. 80ರಷ್ಟು ಪದವೀಧರರು ಕೌಶಲರಾಗಿ ಹೊರಬರುವುದಿಲ್ಲ. ಅಂಥವರಿಗೆ ಸ್ಕಿಲ್ ಡೆವಲಪ್ವೆುಂಟ್ ಕಾರ್ಯಕ್ರಮದ ಬಗ್ಗೆ ಪ್ರಸ್ತಾಪಿಸಲಾಗಿದೆ. ಒಟ್ಟಾರೆ ದೇಶದ ಅಭಿವೃದ್ಧಿ ದೃಷ್ಟಿಯಿಂದ ಚೀನಾ ಮಾದರಿ ಆರ್ಥಿಕತೆ ಅಳವಡಿಸಿಕೊಳ್ಳುವ ಅಗತ್ಯವೂ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಲೆಕ್ಕಪರಿಶೋಧಕ ಸುಮೇರಮಲ್ ಓಸ್ತವಾಲ್ ಮಾತನಾಡಿ, ಆನ್ಲೈನ್ನಲ್ಲಿ ಪಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಿ ತಕ್ಷಣವೇ ನಂಬರ್ ಪಡೆದುಕೊಳ್ಳುವುದು ಹಾಗೂ ಪಾನ್ ನಂಬರ್ ಹಾಗೂ ಆಧಾರ್ ಸಂಖ್ಯೆ ಲಿಂಕ್ ಮಾಡುವ ಯೋಜನೆ ಸ್ವಾಗತಾರ್ಹ ಎಂದರು.
ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ ಸ್ವಾಗತಿಸಿದರು. ಸಂಸ್ಥೆಯ ಉಪಾಧ್ಯಕ್ಷರಾದ ವಿನಯ ಜವಳಿ, ಸಿದ್ದೇಶ್ವರ ಕಮ್ಮಾರ, ಗೌರವ ಕಾರ್ಯದರ್ಶಿ ಅಶೋಕ ಗಡಾದ, ಇತರರಿದ್ದರು.
ಇ- ಕಾಮರ್ಸ್ ವ್ಯವಹಾರಗಳಲ್ಲಿ ನಕಲಿ ರಸೀದಿ ನೀಡಿದರೆ ಆ ರಸೀದಿಯಲ್ಲಿ ಇರುವಷ್ಟು ನಗದು ದಂಡ ವಿಧಿಸುವುದಷ್ಟೇ ಅಲ್ಲ ಆ ಕಂಪನಿಯ ಲೆಕ್ಕಪರಿಶೋಧಕರ ಮೇಲೂ ದಂಡ ವಿಧಿಸುವ ಪ್ರಸ್ತಾಪ ಇಡಲಾಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ತಪು್ಪ ಎಂಟ್ರಿ ಮಾಡುವಂತಿಲ್ಲ. ಚಾರಿಟಬಲ್ ಟ್ರಸ್ಟ್ಗಳಿಗೆ ದೇಣಿಗೆ ಕೊಡುವಾಗ ಪಾನ್ ಸಂಖ್ಯೆ ಕಡ್ಡಾಯ ಮಾಡಲಾಗಿದೆ. ಪ್ರತಿಯೊಂದು ವ್ಯವಹಾರ ಬ್ಯಾಂಕಿಂಗ್ ವ್ಯವಸ್ಥೆಯಡಿ ಮಾಡುವುದು ಅನಿವಾರ್ಯ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮಗಳನ್ನು ನೋಡಬೇಕು. | ಸುಮೇರಮಲ್ ಓಸ್ತವಾಲ್ ಲೆಕ್ಕಪರಿಶೋಧಕ