ಆ್ಯಸಿಡ್ ಕುಡಿಸಿ ಅಕ್ಕಸಾಲಿಗನ ಕೊಲೆ; ಚಿನ್ನಾಭರಣ ದೋಚಿ ಪರಾರಿಯಾದ ದುಷ್ಕರ್ಮಿಗಳು

Vijaykumar
Published on

ವಾಡಿ: ಬಂಗಾರದ ಆಭರಣಗಳನ್ನು ದೋಚಿ, ಆ್ಯಸಿಡ್ ಕುಡಿಸಿ ಅಕ್ಕಸಾಲಿಗನನ್ನು ಕೊಲೆಗೈದ ಘಟನೆ ರಾವೂರ್ ಕ್ರಾಸ್ ಬಳಿ ಗುರುವಾರ ಸಂಜೆ ಜರುಗಿದೆ.

ಕಲಬುರಗಿಯ ಶಹಾಬಜಾರ್‌ನ ನಿವಾಸಿ ವಿಜಯಕುಮಾರ ಶೀಲವಂತ (38) ಕೊಲೆಯಾದವ. ಕಲಬುರಗಿಯ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಗುರುವಾರ ಬೆಳಗ್ಗೆ ಚಿತ್ತಾಪುರಕ್ಕೆ ಹೋಗಿದ್ದು, ಸಂಜೆ ಹಲಕರ್ಟಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಇಲ್ಲಿಂದ ವಾಪಸ್ ಆಗುವಾಗ ಕೆಲ ದುಷ್ಕರ್ಮಿಗಳು ವಿಜಯಕುಮಾರ ಅವರನ್ನು ಹಿಡಿದು, ಆ್ಯಸಿಡ್ ಕುಡಿಸಿದ್ದಾರೆ. ಅಲ್ಲದೆ ರಾಡ್‌ನಿಂದ ತಲೆಗೆ ಬಲವಾಗಿ ಹೊಡೆದು, ಆಭರಣ ಹಾಗೂ ಹಣ ದೋಚಿ ಪರಾರಿಯಾಗಿದ್ದಾರೆ.

ತೀವ್ರ ಗಾಯಗೊಂಡಿದ್ದ ವಿಜಯಕುಮಾರ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಶಹಾಬಾದ್ ಡಿವೈಎಸ್‌ಪಿ ಉಮೇಶ ಚಿಕ್ಕಮಠ, ಸಿಪಿಐ ಪ್ರಕಾಶ ಯಾತನೂರ, ಪಿಎಸ್‌ಐ ಮಹಾಂತೇಶ ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಸಿ ಕ್ಯಾಮರಾ ದೃಶ್ಯಾವಳಿ ಮಾಯ ?
ವಿಜಯಕುಮಾರ ಶೀಲವಂತ ಅವರು ಗುರುವಾರ ಸಂಜೆ 6 ಗಂಟೆಗೆ ಹಲಕರ್ಟಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿರುವ ಬಗ್ಗೆ ದೇಗುಲದ ಸಿಸಿ ಟಿವಿ ಕ್ಯಾಮರಾದಲ್ಲಿ ದೃಶ್ಯಗಳು ದಾಖಲಾಗಿದ್ದವು. ಆದರೆ ಬಳಿಕ 8 ಗಂಟೆವರೆಗೂ ಯಾವುದೇ ದೃಶ್ಯಾವಳಿಗಳು ದಾಖಲಾಗಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆದ ಬಳಿಕವೇ ಸತ್ಯಾಸತ್ಯತೆ ಹೊರಬಲಿದ್ದು, ಸಿಸಿ ಟಿವಿ ಕ್ಯಾಮರಾ ಪರಿಶೀಲಿಸಲು ಪೊಲೀಸರು ಮುಂದಾಗಿದ್ದಾರೆ.ದದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net