

ರಾಯಚೂರು: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪೆದವೇಗಿಯಲ್ಲಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ರಾಜ್ಯದ ನವೋದಯ ಶಾಲೆ ವಿದ್ಯಾರ್ಥಿಗಳು ಆಹಾರದಲ್ಲಿ ಏರುಪೇರಿನಿಂದಾಗಿ ಅಸ್ವಸ್ಥಗೊಂಡ ಶನಿವಾರ ರಾತ್ರಿ ಜರುಗಿದೆ.
ರಾಯಚೂರು ಜಿಲ್ಲೆಯ ಮುದಗಲ್‌ನ ಜವಾಹರ್ ನವೋದಯ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ ರಾಜ್ಯದ ವಿವಿಧ ನವೋದಯ ಶಾಲೆಗಳ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಪೆದವೇಗಿಗೆ ತೆರಳಿದ್ದರು.
ಶನಿವಾರ ರಾತ್ರಿ ವಿದ್ಯಾರ್ಥಿಗಳಿಗೆ ಚಿಕನ್ ಊಟ ಬಡಿಸಲಾಗಿದ್ದು, ಊಟ ಮಾಡಿದ ಬಹುತೇಕ ವಿದ್ಯಾರ್ಥಿಗಳು ಆಹಾರದಲ್ಲಿನ ಏರುಪೇರಿನಿಂದಾಗಿ ಆಗಿ ವಾಂತಿ ಮಾಡಿಕೊಂಡಿದ್ದು, ಅಸ್ವಸ್ಥಗೊಂಡ ರಾಜ್ಯದ 30 ವಿದ್ಯಾರ್ಥಿಗಳು ಸೇರಿದಂತೆ 80 ವಿದ್ಯಾರ್ಥಿಗಳನ್ನು ವೇಲೂರಿಗೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಅಸ್ವಸ್ಥಗೊಂಡ ವಿದ್ಯಾರ್ಥಿಗಳಲ್ಲಿ ರಾಯಚೂರು,ಕೊಪ್ಪಳ, ಬೆಳಗಾವಿ, ವಿಜಯಪುರ, ಬೆಂಗಳೂರು, ಮಡಿಕೇರಿ ಸೇರಿದಂತೆ ರಾಜ್ಯದ ನವೋದಯ ಶಾಲೆಗಳ ವಿದ್ಯಾರ್ಥಿಗಳಿದ್ದು, ಎಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.