ಆಹಾರ ಸ್ವಾವಲಂಬನೆಯಿಂದ ಆರೋಗ್ಯಕರ ಸಮಾಜ

8ark-1
Published on

ಅರಕಲಗೂಡು: ಆಹಾರ ಉತ್ಪಾದನೆಯಲ್ಲಿ ಹೆಚ್ಚು ಸ್ವಾವಲಂಬನೆ ಸಾಧಿಸುವ ಮುಖೇನ ಆರೋಗ್ಯಕರ ಸಮಾಜದ ಬೆಳವಣಿಗೆಯಲ್ಲಿ ಯುವ ಸಮುದಾಯ ಪ್ರಮುಖ ಪಾತ್ರ ವಹಿಸಬೇಕಿದೆ ಎಂದು ಟೈಮ್ಸ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ಸಲಹೆ ನೀಡಿದರು.
ಪಟ್ಟಣದ ಹಾಸನ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಶನಿವಾರ ಆಯೋಜಿಸಿದ್ದ ಆಹಾರ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಹಾರ ವಸ್ತುಗಳ ಅಪವ್ಯಯ ಮಾಡುವ ಮುನ್ನ ಅದನ್ನು ಬೆಳೆಯುವ ರೈತರ ಪರಿಶ್ರಮ ನಮ್ಮ ಕಣ್ಣಮುಂದೆ ಬರಬೇಕು. ಹವಾಮಾನ ವೈಪರಿತ್ಯ, ವನ್ಯ ಜೀವಿಗಳ ಹಾವಳಿ, ಬೆಳೆದ ಬೆಳೆಗೆ ಬೆಲೆ ಇಲ್ಲದೆ ಪಡುವ ಪರಿಪಾಟಲು ಸೇರಿದಂತೆ ಹಲವು ಕಷ್ಟ ಕೋಟಲೆಗಳನ್ನು ಸಹಿಸಿಕೊಂಡು ಆಹಾರ ಉತ್ಪಾದಿಸಿ ನಮಗೆ ನೀಡುವ ರೈತನಿಗೆ ಅನ್ನದ ತಟ್ಟೆಯ ಮುಂದೆ ಕುಳಿತಾಗ ಧನ್ಯವಾದ ಹೇಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಆಹಾರದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಹೀಗಾಗಿ ಆಹಾರದ ಪ್ರಾಮುಖ್ಯತೆ ಮತ್ತು ಅದನ್ನು ಉತ್ಪಾದಿಸುವುದರ ಹಿಂದಿರುವ ಪರಿಶ್ರಮದ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಅತ್ಯಗತ್ಯ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಕೀಲ ಕೇಶವಮೂರ್ತಿ ಮಾತನಾಡಿ, ಸರಳವಾದ ಜೀವನ ಆರೋಗ್ಯದ ಗುಟ್ಟು. ಹಾಗೆಯೇ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ನಾಣ್ಣುಡಿಯಂತೆ ಪೌಷ್ಠಿಕಾಂಶಯುಕ್ತ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಆಹಾರದ ಗುಣಮಟ್ಟ ಕುರಿತು ಎಚ್ಚರ ವಹಿಸುವುದು ಅಗತ್ಯ, ಆಹಾರದ ಕಲಬೆರಕೆ ಅಪರಾಧವಾಗಿದ್ದು, ಇದಕ್ಕೆ ಕಾನೂನಿನಲ್ಲಿ ಕಠಿಣ ಶಿಕ್ಷೆಯೂ ಇದೆ ಎಂದರು.
ಪ್ರಾಂಶುಪಾಲ ಪಿ.ನವೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಶ್ರೇಯಸ್, ಕೃಷ್ಣಮೂರ್ತಿ ಇತರರಿದ್ದರು. ವಿದ್ಯಾರ್ಥಿಗಳ 13 ತಂಡ ಚಿಕನ್ ಬಿರಿಯಾನಿ, ಗ್ರೀನ್ ಕಬಾಬ್, ಚಿಕನ್ 65, ಗುಲಾಬ್ ಜಾಮೂನ್, ಅಕ್ಕಿರೊಟ್ಟಿ, ಮಸಾಲೆ ರೊಟ್ಟಿ, ನಿಪ್ಪಟ್ಟು ಸೇರಿದಂತೆ ವಿವಿಧ ಬಗೆಯ ಸಸ್ಯಾಹಾರಿ, ಮಾಂಸಾಹಾರಿ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡಿದರು. ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಪೋಷಕರು ಆಹಾರ ವಸ್ತುಗಳನ್ನು ಖರೀದಿಸಿ ಸವಿದರು. 40 ಸಾವಿರ ರೂ ಬಂಡವಾಳ ತೊಡಗಿಸಿ 63 ಸಾವಿರ ರೂ ವಹಿವಾಟ ನಡೆಸಿ 23 ಸಾವಿರ ರೂ ಲಾಭ ಗಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net