ಆಹಾರ ಸೇವನೆಯಲ್ಲಿ ನಿಯಮ ಅನುಸರಿಸಿ

17sor8
ಸೊರಬ ಕಾನುಕೇರಿ ಮಠದಲ್ಲಿ ಆಯೋಜಿಸಿದ್ದ ವಚನ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಜಡೆ ಹಿರೇಮಠದ ಘನಬಸವ ಅಮರೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. ರಾಜಶೇಖರ, ರೇಖಾ ಜಗದೀಶ್, ಚಿನ್ನಮ್ಮ, ನಿಜಗುಣ ಚಂದ್ರಶೇಖರ್ ಇತರರಿದ್ದರು.
Published on

ಸೊರಬ: ಭಾರತೀಯ ಪರಂಪರೆಯಲ್ಲಿ ಆಹಾರ ಪದ್ಧತಿ ಮತ್ತು ಸೇವನೆಗೆ ನಿಯಮಗಳಿವೆ. ಅದನ್ನು ಕೇವಲ ಶಾರೀರಿಕ ಸದೃಢತೆಗಾಗಿ ಸೇವಿಸದೆ, ಮಾನಸಿಕ ಸಿದ್ಧಿಗಾಗಿ ಪ್ರಸಾದ ರೂಪದಲ್ಲಿ ಸೇವಿಸಿದಾಗ ಮನೋವಿಕಾರಗಳು ದೂರವಾಗಲು ಸಾಧ್ಯ ಎಂದು ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಪಟ್ಟಣದ ಕಾನುಕೇರಿ ಮಠದಲ್ಲಿ ಶ್ರೀ ಸದ್ಗುರು ಸೇವಾ ಟ್ರಸ್ಟ್,ಅಕ್ಕನ ಬಳಗ ಸೇವಾ ಟ್ರಸ್ಟ್ ಮತ್ತು ಟೌನ್ ವೀರಶೈವ ಸಮಾಜದಿಂದ ಆಯೋಜಿಸಿದ್ದ ವಚನ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಮನುಷ್ಯ ತನ್ನ ಜೀವನದಲ್ಲಿ ತ್ಯಾಗ, ಭೋಗ, ಯೋಗದ ಚಿಂತನೆಯ ಹಾದಿಯಲ್ಲಿದ್ದರೂ ಸರಿಯಾದ ಪ್ರಮಾಣದಲ್ಲಿ ಆಹಾರ, ವಿಹಾರ, ವಿಚಾರಗಳಿಂದ ಕೂಡಿದ ಗುಣಗಳನ್ನು ಹೊಂದಿರದಿದ್ದರೆ ಅವನ ಜೀವನ ರೋಗಗಳ ತಾಣವಾಗುತ್ತದೆ. ನಿಸರ್ಗವು ಬದುಕಿನ ಭಾವನೆಗಳನ್ನು ಬದಲಾಯಿಸುವ ಶಕ್ತಿ ಇದ್ದಂತೆ. ಜೀವನದಲ್ಲಿ ಆನಂದವನ್ನು ಪಡೆಯಲು ಒಳ್ಳೆಯ ಚಿಂತನೆಗಳು ಬೇಕು ಎಂದು ತಿಳಿಸಿದರು. ತಾಲೂಕು ಆಸ್ಪತ್ರೆ ವೈದ್ಯಾಕಾರಿ ಪ್ರಭು ಕೆ. ಸಾಹುಕಾರ್ ಮಾತನಾಡಿ, ಬದಲಾದ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದ ಮನುಷ್ಯನಿಗೆ ಅನೇಕ ಬಗೆಯ ರೋಗಗಳು ಬರುತ್ತಿವೆ. ಜೀವನದಲ್ಲಿ ಕೆಲವು ಬದಲಾವಣೆ ಹೊಂದಿದಾಗ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ. ವಚನಗಳು ಹೊಸ ಸಂದೇಶ ಮತ್ತು ಭಾವನೆಗಳನ್ನು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಅಮೂಲ್ಯ ಪಾಠಗಳು ಎಂದರು. ನಿವೃತ್ತ ಶಿಕ್ಷಕ ಮೋಹನ್ ದಾಸ್, ಶ್ರೀ ಬಸವ ಸಿದ್ದೇಶ್ವರ ಸ್ವಾಮೀಜಿ, ರಾಜಶೇಖರ ಗುತ್ತಿ, ಅಕ್ಕನ ಬಳಗದ ಅಧ್ಯಕ್ಷೆ ರೇಖಾ ಜಗದೀಶ್, ಚಿನ್ನಮ್ಮ, ನಿಜಗುಣ ಚಂದ್ರಶೇಖರ್, ಡಾ. ನಾಗರಾಜ್, ಉದ್ಯಮಿ ನಾಗರಾಜ್, ಮಧುರಾಯ್ ಜಿ. ಶೇಟ್, ಆರ್.ಪಾಟೀಲ್, ಪುಷ್ಪಾ ಇತರರಿದ್ದರು.

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅವಿನಾಭಾವ ಸಂಬಂಧವಿದೆ. ಇತ್ತಿಚೆಗೆ ಸ್ತನ ಕ್ಯಾನ್ಸರ್ ಸಮಸ್ಯೆ ಹೆಚ್ಚುತ್ತಿದೆ. ಯಾವುದೇ ಸಂಕೋಚಕ್ಕೆ ಒಳಗಾಗದೆ ಸ್ತ್ರೀರೋಗ ತಜ್ಞರ ಹತ್ತಿರ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಗುಣಮುಖರಾಗಲು ಸಾಧ್ಯ. ಅರುಂಧತಿ ಕಾಳೆ, ನಿವೃತ್ತ ಆರೋಗ್ಯ ನಿರೀಕ್ಷಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net