ಆಹಾರ ಪದ್ಧತಿಗೆ ತೊಂದರೆ ನೀಡಬೇಡಿ

4 ckm 16 dantaramakki srinivas
ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ದಂಟರಮಕ್ಕಿ ಶ್ರೀನಿವಾಸ
Published on
ಚಿಕ್ಕಮಗಳೂರು: ಸಂವಿಧಾನಾತ್ಮಕವಾದ ಪ್ರತಿಯೊಬ್ಬರ ಇಚ್ಚೆಯ ಆಹಾರ ಪದ್ಧತಿಗೆ ಜಿಲ್ಲಾಡಳಿತ ತೊಂದರೆ ಕೊಡಬಾರದು ಎಂದು  ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ದಂಟರಮಕ್ಕಿ ಶ್ರೀನಿವಾಸ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರ ಕೂಡಲೇ ದನದ ಮಾಂಸದ ಕಸಾಯಿಖಾನೆಗಳಿಗೆ ಪರವಾನಗಿ ನೀಡಬೇಕು.ಬಕ್ರೀದ್ ಹಬ್ಬದ ಅಂಗವಾಗಿ ಜೂನ್ ೬ರಂದು ಜಿಲ್ಲಾಡಳಿತ ಹೊರಡಿಸಿರುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಬೆಂಗಳೂರು, ಮಂಗಳೂರು ಮತ್ತು ಇತರೆ ನಗರಗಳಲ್ಲಿ ನೀಡಿರುವ  ಪರವಾನಗಿ ನಿಯಮವನ್ನು ಉಳಿದ ಎಲ್ಲಾ ಜಿಲ್ಲೆಗಳಿಗೂ ಪರವಾನಗಿ ನಿಯಮ ಅನ್ವಯಿಸುವಂತೆ ಮಾಡಬೇಕು. ಅಧಿಕಾರಿಗಳು ಒತ್ತಾಯ ಪೂರ್ವಕವಾಗಿ ನಮ್ಮ ಆಹಾರ ಪದ್ಧತಿಗೆ ತೊಂದರೆ ಉಂಟುಮಾಡಿದ ವ್ಯಕ್ತಿಗಳಿಗೆ ಕಾನೂನಾತ್ಮಕವಾಗಿ ಕೇಸು ದಾಖಲಿಸಬೇಕು ಎಂದು ಆಗ್ರಹಿಸಿದರು. ಜೂನ್ ೭ರಂದು ಬಕ್ರೀದ್ ಹಬ್ಬವಿದ್ದು, ಈ ಹಬ್ಬಕ್ಕೆ ದನ,ಎಮ್ಮೆ, ಒಂಟೆಗಳ ಪ್ರಾಣಿವಧೆ ಮಾಡದಂತೆ ೮ ತಂಡಗಳನ್ನು ರಚಿಸಿರುವುದಾಗಿ ಜಿಲ್ಲಾಧಿಕಾರಿಗಳು ಹೇಳಿಕೆ ನೀಡಿದ್ದು, ಈ ಅವೈಜ್ಞಾನಿಕ ಹೇಳಿಕೆಯನ್ನು ದಲಿತ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ. ಈ ರೀತಿಯ ಅವೈಜ್ಞಾನಿಕ ನಿಯಮಗಳನ್ನು ಜಾರಿಮಾಡುವುದು ಒಂದು ಸಮುದಾಯದ ಸಂಪ್ರದಾಯಕ ಆಚರಣೆಗೆ ಧಕ್ಕೆ ತಂದಂತಾಗುತ್ತದೆ. ಹೊಸ ನಿಯಮಜಾರಿಗೊಳಿಸಿ ಕೋಮುಸಂಘರ್ಷಕ್ಕೆ ಕಾರಣವಾದಂತಿದೆ ಎಂದು ತಿಳಿಸಿದರು. ದೇಶದಲ್ಲಿ ಸಂವಿಧಾನಾತ್ಮಕವಾದ ಆಹಾರ ಪದ್ಧತಿಯನ್ನು ಯಾರು ಯಾವುದೇ ಸಮುದಾಯಕ್ಕೆ ಪ್ರಶ್ನೆಮಾಡಿರುವುದಿಲ್ಲ,  ಇದನ್ನು ಅರಿತಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿನಾಕಾರಣ ಅಲ್ಪಸಂಖ್ಯಾತಸಮುದಾಯಕ್ಕೆ ಮತ್ತು ಬಡವರಿಗೆ ಸಂವಿಧಾನ ವಿರೋಧಿ ನಿಯಮಗಳನ್ನು ಜಾರಿಮಾಡುತ್ತಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಗೌಸ್‌ಮುನೀರ್, ದಲಿತಸಂಘಟನೆಗಳ ಒಕ್ಕೂಟದ ಮುಖಂಡ ಮರ್ಲೆ ಅಣ್ಣಯ್ಯ ಒಕ್ಕೂಟದ ಮುಖಂಡ ಭೀಮಯ್ಯ,  ಅಂಬೇಡ್ಕರ್ ಸೇನೆಯ ಸಂತೋಷ್, ಬಿ.ಎಂ. ರಘು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net