

ಕೋಲಾರ: ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯಲ್ಲಿ ತೀರ್ಮಾನ ಕೈಗೊಂಡಿದ್ದರೂ ಗಮನಕ್ಕೆ ತರದೆ ಯೋಜನೆಗಳಲ್ಲಿ ಫಲಾನುಭವಿಗಳ ಆಯ್ಕೆ, ಅನುದಾನ ಬಳಕೆ ಬಗ್ಗೆ ಸಮಿತಿ ಅಧ್ಯಕ್ಷ ಅರುಣ್‌ಪ್ರಸಾದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಗೆ ಗುರುವಾರ ಭೇಟಿ ನೀಡಿ, ಎಸ್ಸಿ, ಎಸ್ಟಿ ಸಮುದಾಯಕ್ಕೆ ಇಲಾಖೆಯಿಂದ ಸಿಗುವ ಅನುಕೂಲಗಳ ಬಗ್ಗೆ ಮಾಹಿತಿ ಕೋರಿ ಪತ್ರ ಬರೆದು ಎರಡೂವರೆ ತಿಂಗಳಾಗಿದ್ದರೂ ಎರಡು ಯೋಜನೆ ಬಗ್ಗೆ ವಿಷಯ ನಿರ್ವಾಹಕರಿಂದ ಮಾಹಿತಿ ಸಿಕ್ಕಿದ್ದು ಹೊರತುಪಡಿಸಿ ಉಳಿದಂತೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಗನವಾಡಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ ಕಳಪೆಯಾಗಿದೆ ಎಂಬ ಆರೋಪವಿದೆ. ಆಹಾರದ ಗುಣಮಟ್ಟ ಪರೀಕ್ಷೆಗೆ ಮಾದರಿಗಳನ್ನು ಬೆಂಗಳೂರಿಗೆ ಕಳುಹಿಸಿ ಅಲ್ಲಿ ನೀಡುವ ವರದಿ ನಂಬುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಬಡ ಮಕ್ಕಳಿಗೆ ನೀಡುವ ಆಹಾರದಲ್ಲಿ ರಾಜಿಯಾಗಬೇಡಿ, ಆಹಾರಗಳನ್ನು ಖುದ್ದು ಪರಿಶೀಲಿಸುವಂತೆ ಇಲಾಖೆ ಉಪನಿರ್ದೇಶಕಿ ಎಂ.ಜಿ.ಪಾಲಿಗೆ ಸೂಚಿಸಿದರು.
ಹಿರಿಯ ನಾಗರಿಕರ ಮತ್ತು ಅಂಗವಿಕಲರ ಕಲ್ಯಾಣಾಧಿಕಾರಿ ಮುನಿರಾಜಪ್ಪ ಮಾತನಾಡಿ, ದ್ವಿಚಕ್ರ ವಾಹನ ಸೌಲಭ್ಯ ಕಲ್ಪಿಸುವ ಕಾರ್ಯಕ್ರಮದಡಿ 53 ಫಲಾನುಭವಿಗಳಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿಯಂತೆ 16 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಎಸ್ಸಿ ಸಮುದಾಯಕ್ಕೆ ನಿಗದಿತ ಗುರಿಗೆ ಚೀಟಿ ಮೂಲಕ, ಎಸ್ಸಿ ಸಮುದಾಯಕ್ಕೆ 1, ಹಾಗೂ ಸಾಮಾನ್ಯ ವರ್ಗಕ್ಕೆ ಹೆಚ್ಚುವರಿ ಅರ್ಜಿ ಬಂದಿದ್ದರಿಂದ ಚೀಟಿ ಎತ್ತಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಅಂಗನವಾಡಿಗಳಿಗೆ ಪೀಠೋಪಕರಣ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಸಂಬಂಧ ಅಂದು ಜಿಪಂ ಸಿಇಒ ಆಗಿದ್ದ ರಾಜೇಂದ್ರ ಚೋಳನ್ ಎಲ್ಲ ಐದು ತಾಲೂಕಿನ ಅಧಿಕಾರಿಗಳನ್ನು ಅಮಾನತು ಮಾಡಿದ್ದರು. ಈ ಕುರಿತ ಪ್ರಗತಿಯ ವಿವರ, 2015ರಿಂದ ಇಲಾಖೆಗೆ ಕೇಂದ್ರ, ರಾಜ್ಯ ಹಾಗೂ ಜಿಪಂನಿಂದ ಬಿಡುಗಡೆಯಾದ ಅನುದಾನ, ಕಚೇರಿ ನಿರ್ವಹಣೆಗೆ ಬಿಡುಗಡೆಯಾದ ಅನುದಾನ, ಬಳಕೆಯಾಗಿದ್ದೆಷ್ಟು ಇನ್ನಿತರ ವಿವರ ಒದಗಿಸುವಂತೆ ಸೂಚಿಸಿದರು.
ಈ ಸಾಲಿನಲ್ಲಿ ಜಿಪಂ ಅನುದಾನ 20 ಲಕ್ಷ ರೂ.ಗಳಲ್ಲಿ ತಲಾ 78,490 ರೂ.ಗಳಂತೆ ಒಟ್ಟು 26 ದ್ವಿಚಕ್ರ ವಾಹನಗಳನ್ನು ಟೆಂಡರ್ ಮೂಲಕ ಖರೀದಿಸಲಾಗಿದ್ದು, ವಿತರಣೆ ನಡೆಸಬೇಕಿದೆ. ಸಾಧನ ಸಲಕರಣೆಗಾಗಿ 5 ಲಕ್ಷ ರೂ. ಬಿಡುಗಡೆಯಾಗಿದ್ದು, ಫಲಾನುಭವಿಗಳ ಆಯ್ಕೆ ನಡೆಸಬೇಕಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ನೀಡುವ ಯೋಜನೆ ಇದೆ. ಮುಂದಿನ ದಿನಗಳಲ್ಲಿ ಇಲಾಖೆಯ ಯಾವುದೇ ಕಾರ್ಯಕ್ರಮಗಳಿದ್ದರೂ ಸಮಿತಿ ಗಮನಕ್ಕೆ ತಂದು ಮುಂದಿನ ಪ್ರಕ್ರಿಯೆ ಕೈಗೊಳ್ಳುವುದಾಗಿ ಹೇಳಿದರು.
ಮನೆ ಬಾಗಿಲಿಗೆ ಕಳುಹಿಸಲೇ?: ಅಂಗವಿಕಲರಿಗೆ ಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ಸ್ಥಾಯಿ ಸಮಿತಿ ಗಮನಕ್ಕೆ ತಾರದೆ ಫಲಾನುಭವಿಗಳಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ ಸೌಲಭ್ಯ ಕಲ್ಪಿಸಲಾಗಿದೆ. ಸಮಿತಿ ಗಮನಕ್ಕೆ ತಂದೇ ಮುಂದುವರಿಯಬೇಕೆಂದು ಸ್ಥಾಯಿ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದರೂ ಪಾಲಿಸಿಲ್ಲ. ನಾವು ನೀಡಿದ ಪಟ್ಟಿಯಲ್ಲೂ ಅನೇಕರಿಗೆ ಸೌಲಭ್ಯ ಸಿಕ್ಕಿಲ್ಲ, ಫಲಾನುಭವಿಗಳು ಮನೆ ಮುಂದೆ ಬಂದು ಕೇಳುತ್ತಿದ್ದಾರೆ. ಅವರನ್ನು ನಿಮ್ಮ ಮನೆ ಬಾಗಿಲಿಗೆ ಕಳುಹಿಸಲೇ ಎಂದು ಅರುಣ್‌ಪ್ರಸಾದ್ ತರಾಟೆಗೆ ತೆಗೆದುಕೊಂಡರು.