

ಎಚ್.ಡಿ.ಕೋಟೆ: ದೇಶದ ಬೆನ್ನೆಲುಬು ಆಗಿರುವ ರೈತರ ದಿನ ಆಚರಿಸುವುದು ಪುಣ್ಯದ ಕೆಲಸ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅಭಿಪ್ರಾಯಪಟ್ಟರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಶುಕ್ರವಾರ ರೈತ ಕಲ್ಯಾಣ ಸಂಘಟನೆ ವತಿಯಿಂದ ಆಯೋಜಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾವೆಲ್ಲರೂ ನೆಮ್ಮದಿಯಿಂದ ಜೀವನ ನಡೆಸುತಿದ್ದೇವೆ ಎಂದರೆ ಅದಕ್ಕೆ ಕಾರಣ ರೈತರು. ಮಳೆ, ಬಿಸಿಲು ಎನ್ನದೆ ದುಡಿದು ನಮ್ಮೆಲ್ಲರ ಜೀವ ಉಳಿಸುತ್ತಿರುವ ರೈತರನ್ನು ಪ್ರತಿದಿನ ಸ್ಮರಿಸುವುದು ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.
ರೈತನ ಪರಿಶ್ರಮ ಇಲ್ಲದಿದ್ದರೆ ದೇಶದಲ್ಲಿ ಬಡತನ ತಾಂಡವವಾಡುತ್ತದೆ. ಸ್ವಾತಂತ್ರೃ ಬಂದಾಗ ದೇಶದಲ್ಲಿ ಬಡತನ, ಕ್ಷಾಮ, ಹಸಿವು ಇತ್ತು. ಜನರಿಗೆ ಬೇಕಾದ ಆಹಾರ ಪದಾರ್ಥಗಳನ್ನು ಬೆಳೆಯಲು ಆಗಿರಲಿಲ್ಲ. ಹೊರದೇಶದಿಂದ ಗೋಧಿ, ಅಕ್ಕಿ ತರಿಸುವಂತ ಪದ್ಧತಿ ಇತ್ತು. ಇಂಥ ಸಂದರ್ಭದಲ್ಲಿ ದೇಶದಲ್ಲಿ ಆಹಾರ ಧಾನ್ಯ 55 ಮಿಲಿಯನ್ ಟನ್ ಇತ್ತು. ಆದರೆ ಪ್ರಸ್ತುತ 317 ಮಿಲಿಯನ್ ಟನ್ ಆಹಾರ ಧಾನ್ಯ ಉತ್ಪಾದನೆ ಮಾಡಲಾಗುತ್ತಿದ್ದು, ಆಹಾರ ಉತ್ಪಾದನೆಯಲ್ಲಿ ದೇಶ ಎರಡನೇ ಸ್ಥಾನದಲ್ಲಿದೆ. ಇದಕ್ಕೆ ಅನ್ನದಾತರ ಪರಿಶ್ರಮ ಕಾರಣ ಎಂದು ಸ್ಮರಿಸಿದರು.
ಸೌಮ್ಯಾ ಅನಿಲ್ ಚಿಕ್ಕಮಾದು ಮಾತನಾಡಿ, ಮನೆ ಮುಂದೆಯೇ ಆಹಾರ ಪದಾರ್ಥಗಳು ಸಿಗುತ್ತಿರುವುದಕ್ಕೆ ರೈತರ ಶ್ರಮ ಇದೆ. ಪೌಷ್ಟಿಕ ಆಹಾರ ಮನೆ ಬಾಗಿಲಿಗೆ ಬರುತ್ತಿದ್ದು, ತಿನ್ನುವ ಅನ್ನದ ಅಗಳಿನ ಹಿಂದೆ ರೈತನ ಬೆವರಿನ ದುಡಿಮೆ ಇದೆ ಎಂದು ಅಭಿಪ್ರಾಯಪಟ್ಟರು.
ರೈತ ಕಲ್ಯಾಣ ಸಂಘದ ಅಧ್ಯಕ್ಷ ಚಂದನ್‌ಗೌಡ ಮಾತನಾಡಿ, ಗಡಿಯಲ್ಲಿ ದೇಶವನ್ನು ಕಾಯುವವರು ಸೈನಿಕರಾದರೆ ನಾಡಲ್ಲಿ ನಮ್ಮನ್ನು ರಕ್ಷಿಸುತ್ತಿರುವವರು ರೈತರು. ಅನ್ನದಾತರಿಗೆ ನಮನ ಸಲ್ಲಿಸಿ ಆತನನ್ನು ಗೌರವಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಬಿಡಗಲು ವಿರಕ್ತ ಮಠದ ಶ್ರೀ ಮಹಾದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮಣ್ಣನ್ನು ರಕ್ಷಿಸಿ ಶೀರ್ಷಿಕೆಯ ಭಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಆಡಳಿತಸೌಧ ಸಮೀಪ ಚಂದನ್‌ಗೌಡ ಬಸವನಿಗೆ ಪೂಜೆ ಮಾಡುವ ಮೂಲಕ ಎತ್ತಿನ ಗಾಡಿ ಮೆರವಣಿಗೆಗೆ ಚಾಲನೆ ನೀಡಿದರು.
ನಂದಿ ಕಂಬ, ಸತ್ತಿಗೆ, ಸೂರಪಾನಿ, ಡೊಳ್ಳು ಕುಣಿತ, ಚೆಂಡೆವಾದ್ಯ, ನಾದಸ್ವರ, ವೀರಗಾಸೆ, ಕಳಸ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಸಾಗಿ ಅಂಬೇಡ್ಕರ್ ಭವನದಲ್ಲಿ ಸಮಾವೇಶಗೊಂಡಿತು. ನಾಗಮ್ಮ ಚಿಕ್ಕಮಾದು, ಜೆಡಿಎಸ್ ಮುಖಂಡ ಜಯಪ್ರಕಾಶ್ ಚಿಕ್ಕಣ್ಣ, ಪುರಸಭಾ ಸದಸ್ಯ ಎಚ್.ಸಿ.ನರಸಿಂಹಮೂರ್ತಿ, ಸಿರಾಜ್ ಅಭಿಮಾನಿ ಬಳಗದ ಪ್ರಸನ್ನಗೌಡ, ಶೈಲಾ, ರತ್ನಮ್ಮ, ಸತೀಶ್‌ಗೌಡ, ಎಂ.ಡಿ ಮಂಚಯ್ಯ ಇದ್ದರು.