

ಸಕಲೇಶಪುರ: ಪಡಿತರ ಚೀಟಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತಾಲೂಕು ಆಹಾರ ಇಲಾಖೆ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಆಹಾರ ಇಲಾಖೆ ಕಚೇರಿಗೆ ಸೋಮವಾರ ಭೇಟಿ ನೀಡಿ ಸಾರ್ವಜನಿಕರ ಆಹವಾಲು ಆಲಿಸಿದ ನಂತರ ಮಾತನಾಡಿದ ಅವರು, ಸರ್ಕಾರದ ವಿವಿಧ ಯೋಜನೆಗಳನ್ನು ಪಡೆದುಕೊಳ್ಳಲು ಫಲಾನುಭವಿಗಳ ಆಧಾರ್ ಹಾಗೂ ಪಡಿತರ ಚೀಟಿಗಳು ಹೊಂದಾಣಿಕೆಯಾಗುತ್ತಿಲ್ಲ. ಹಾಗಾಗಿ ಸಾರ್ವಜನಿಕರು ಸರಿಯಾದ ಮಾಹಿತಿ ಇಲ್ಲದೆ ನಿತ್ಯ ಆಹಾರ ಇಲಾಖೆ ಕಚೇರಿ ಎದುರು ನಿಲ್ಲುವಂತಾಗಿದೆ. ದೂರದ ಹಳ್ಳಿಗಳಿಂದ ಕೆಲಸ ಬಿಟ್ಟು ಬರುವ ಜನರಿಗೆ ಸರಿಯಾದ ಮಾಹಿತಿ ಒದಗಿಸಲು ಸಹಾಯವಾಣಿ ಕೇಂದ್ರ ತೆರೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಕಂದಾಯ ಇಲಾಖೆಯಲ್ಲಿ ಆಧಾರ್ ಕಾರ್ಡ್: ಬ್ಯಾಂಕ್ ಖಾತೆಗೆ ಆಧಾರ್ ಹಾಗೂ ಪ್ಯಾನ್‌ಕಾರ್ಡ್ ಜೋಡಣೆಗೆ ಸರ್ಕಾರ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೆ ಗಡುವು ನೀಡಿದೆ. ಆದರೆ, ತಾಲೂಕಿನಲ್ಲಿ ಆಧಾರ್ ಕಾರ್ಡ್‌ನಲ್ಲಿ ಸಾಕಷ್ಟು ಲೋಪಗಳು ಕಂಡು ಬರುತ್ತಿರುವುದರಿಂದ ಪಟ್ಟಣದಲ್ಲಿರುವ ಏಕೈಕ ಆಧಾರ್ ಕೇಂದ್ರವಾದ ಬಿಎಸ್‌ಎನ್‌ಎಲ್ ಕಚೇರಿ ಮುಂಭಾಗ ಜನಜಂಗುಳಿ ಏರ್ಪಟ್ಟು ನಿತ್ಯ ಜನರು ದೈನಂದಿನ ಕೆಲಸ ಬಿಟ್ಟು ಪಟ್ಟಣಕ್ಕೆ ಬರಬೇಕಾಗಿದೆ. ಆದ್ದರಿಂದ, ಈ ಹಿಂದೆ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಧಾರ್‌ಕಾರ್ಡ್ ಕೇಂದ್ರವನ್ನು ಪುನಃ ಆರಂಭಿಸುವಂತೆ ತಹಸೀಲ್ದಾರ್‌ಗೆ ಸೂಚಿಸಲಾಗಿದ್ದು, ಈಗಾಗಲೇ ಈ ಸಂಬಂಧ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದರು.