

ವಿರಾಜಪೇಟೆ: ಜಿಂಕೆಯೊಂದು ಆಹಾರ ಅರಸಿಕೊಂಡು ನಾಡಿಗೆ ಬಂದಿದ್ದು, ತೆಲುಗರ ಬೀದಿಯ ವ್ಯಕ್ತಿಯೊಬ್ಬರು ಅದನ್ನು ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ವಿರಾಜಪೇಟೆ ನಗರದ ತೆಲುಗರ ಬೀದಿಯ ನಿವಾಸಿ ನಿವೃತ್ತ ಬ್ಯಾಂಕ್ ಉದ್ಯೋಗಿ ಕೆ.ಕೆ. ಶಾಮ್‌ಭಟ್ ಅವರ ಮನೆಯ ತೋಟದ ಬಳಿ ಸೋಮವಾರ ಬೆಳಗ್ಗೆ ಸುಮಾರು 8.30ರಲ್ಲಿ ಕೆಲಸಕ್ಕೆ ಬಂದಿದ್ದ ಕಾರ್ಮಿಕನೊಬ್ಬ ಆಡು ಮರಿಯಂತಿರುವ ವನ್ಯಜೀವಿಯೊಂದು ತೋಟದ ಬಳಿ ಓಡಾಡುತ್ತಿರುವುದನ್ನು ಕಂಡಿದ್ದಾನೆ.
ತಕ್ಷಣವೇ ಆತ ಶಾಮ್‌ಭಟ್ ಅವರಿಗೆ ತಿಳಿಸಿದ. ನಂತರ ಅವರು ಕಾರ್ಮಿಕನ ಸಹಾಯದಿಂದ ಅದನ್ನು ಹಿಡಿದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ಅರಣ್ಯ ಉಪ ಸಂರಕ್ಷಣಾ ಅಧಿಕಾರಿ ಗೋಪಾಲ್ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಹರೀಶ್, ಮಹೇಶ್ ಮತ್ತು ನಾಚಪ್ಪ ಅವರು ಜಿಂಕೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ವನ್ಯಜೀವಿ ಆರೈಕೆ ಕೇಂದ್ರಕ್ಕೆ ದಾಖಲಿಸಿದ್ದಾರೆ.