

ಬಳ್ಳಾರಿ : ಶಿಶು ಮರಣ ಮತ್ತು ತಾಯಿ ಮರಣ ತಡೆಗಟ್ಟಲು ಆಸ್ಪತ್ರೆಗಳಲ್ಲಿಯೇ ಹೆರಿಗೆ ಮಾಡಿಸುವ ಮೂಲಕ ಸಹಕರಿಸಬೇಕು ಎಂದು ಡಿಎಚ್‌ಒ ಡಾ.ವೈ.ರಮೇಶ ಬಾಬು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕೌಲ್ಬಜಾರ್ ದಂಪತಿಯೊಬ್ಬರು ಆಸ್ಪತ್ರೆಗೆ ಪರೀಕ್ಷೆ ಮಾಡಿಸಲು ಹೋದಾಗ ಹೆರಿಗೆ ನೋವು ಕಂಡುಬಂದಿದ್ದು, ಮನೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುತ್ತೇವೆ ಎಂದು ಸಿಬ್ಬಂದಿ ತಿಳಿಸಿದಾಗ, ತಕ್ಷಣ ಅಲ್ಲಿಯ ವೈದ್ಯಾಧಿಕಾರಿ ಡಾ.ನರಸಿಂಹ ಮೂರ್ತಿ ಗರ್ಭಿಣಿಯ ಕುಟುಂಬದ ಸದಸ್ಯರೊಂದಿಗೆ ಆಪ್ತ ಸಮಾಲೋಚನೆ ಮಾಡಿ, ಆಸ್ಪತ್ರೆಗೆ ದಾಖಲು ಮಾಡಿದ್ದರು. ರಕ್ತಹೀನತೆ ನಿಯಂತ್ರಣ ಮಾಡುವ ಚುಚ್ಚು ಮದ್ದು ನೀಡಿ, ಮನೆ ಹೆರಿಗೆಯಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಸಮಸ್ಯೆಗಳ ಜೊತೆಗೆ ಗಂಭೀರ ಸಮಸ್ಯೆಗಳು ಕಂಡುಬರುವ ಸಾಧ್ಯತೆ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸುವುದು ಸೂಕ್ತ ಎಂದು ತಿಳಿಸಿ ಆಶಾಕಾರ್ಯಕರ್ತೆಯೊಂದಿಗೆ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿಸಿದ್ದರು. ನಂತರ ಹೆರಿಗೆಯಾಗಿದ್ದು ಪ್ರಸ್ತುತ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.
ಬಂಡಿಹಟ್ಟಿ ವ್ಯಾಪ್ತಿಯ ವಟ್ಟಪ್ಪಕೇರಿಯ ಗರ್ಭಿಣಿಯೊಬ್ಬರು ವಿಮ್ಸ್ನಲ್ಲಿ ಪರೀಕ್ಷೆಗೆಂದು ತೆರಳಿದಾಗ ಮಗುವಿಗೆ ಕುತ್ತಿಗೆ ಸುತ್ತಲು ಕರಳು ಸುತ್ತಿಕೊಂಡಿರುವ ಕುರಿತು ತಿಳಿಸಿದಾಗ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಹಾಗೂ ಗರ್ಭಿಣಿಯು ಆಸ್ಪತ್ರೆಯಲ್ಲಿ ಮಾಹಿತಿ ನೀಡದೇ ಮನೆಗೆ ಬಂದಿದ್ದರು. ವೈದ್ಯಾಧಿಕಾರಿ ಡಾ.ಯಾಸಿನ್, ಆಶಾಕಾರ್ಯಕರ್ತೆಯರನ್ನು ಮನೆಗೆ ಕಳುಹಿಸಿ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿ, ಆಸ್ಪತ್ರೆಗೆ ದಾಖಲು ಮಾಡಿದಾಗ ಮಾತ್ರ ಸಹಜ ಹೆರಿಗೆಯಿಂದ ನಿಮ್ಮ ಹಾಗೂ ಮಗುವಿನ ಕಾಳಜಿ ತೆಗೆದುಕೊಳ್ಳಲು ಸಾಧ್ಯವೆಂದು ಮನವೊಲಿಸಿದ ನಂತರವೇ ಜಿಲ್ಲಾಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿತ್ತು. ಅಲ್ಲಿಯೂ ಅವರು ದಾಖಲಾಗದೇ ಇಲ್ಲದ್ದನ್ನು ಕಂಡು ಗರ್ಭಿಣಿಯ ಮನೆಗೆ ಭೇಟಿ ನೀಡಿ ಪುನಃ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ಹೆರಿಗೆ ಮಾಡಿಸಲಾಗಿದ್ದು, ಪ್ರಸ್ತುತ ತಾಯಿ ಮಗು ಆರೋಗ್ಯವಾಗಿದ್ದಾರೆ.
ಈ ಎರಡು ಘಟನೆಗಳಲ್ಲಿ ಪಾಲಕರ ಪಾತ್ರ ಅತ್ಯಂತ ಮಹತ್ವವಾಗಿದ್ದು ಮನೆಯಲ್ಲಿಯೇ ಹೆರಿಗೆ ಮಾಡಿಸುವುದರಿಂದ ತಾಯಿ ಮತ್ತು ಮಗುವಿಗೆ ಸೋಂಕು ಆಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಮನೆ ಹೆರಿಗೆಗಿಂತ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸುವ ಮೂಲಕ ತಾಯಿ ಮತ್ತು ಮಗುವಿನ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದರು.