

ಕೂಡ್ಲಿಗಿ: ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಿರುವುದಾಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಎಸ್.ಇಮಡಾಪುರ ಗ್ರಾಮದಲ್ಲಿ ಅಂಗನವಾಡಿ ಎ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಸೋಮವಾರ ಮಾತನಾಡಿದರು. ಕ್ಷೇತ್ರದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡಗಳ ನಿರ್ಮಾಣ, ದುರಸ್ತಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಕಟ್ಟಡಗಳ ನಿರ್ಮಾಣ, ಮೂಲ ಸೌಕರ್ಯಕ್ಕೆ ಕೋಟ್ಯಂತರ ರೂ. ಅನುದಾನ ನೀಡಿದ್ದೇನೆ. ಸಮುದಾಯ-ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿರುವುದಾಗಿ ತಿಳಿಸಿದರು.
ಕ್ಷೇತ್ರದ ಎಲ್ಲ 215 ಗ್ರಾಮಗಳಲ್ಲಿ ಸಂಚರಿಸಿ ಜನರ ಬೇಡಿಕೆಗೆ ಅನುಗುಣವಾಗಿ ವಸತಿ, ಸಿಸಿ ರಸ್ತೆ, ರಸ್ತೆ ಹಾಗೂ ಶುದ್ಧ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದು, ಏನೇ ಸಮಸ್ಯೆಗಳು ಇದ್ದಲ್ಲಿ ಖುದ್ದು ಭೇಟಿ ನೀಡಿ ಅಹವಾಕು ಸಲ್ಲಿಸಿದಲ್ಲಿ ಸಮಸ್ಯೆ ಪರಿಹರಿಸಲು ಯತ್ನಿಸುವುದಾಗಿ ತಿಳಿಸಿದರು.
ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜನರಿಗೆ ಸರ್ಕಾರದ ಸೌಲಭ್ಯ ಮುಟ್ಟಿಸಲು ಸೂಚನೆ ನೀಡಿದ್ದೇನೆ. ಸಾರ್ವಜನಿಕರು ಸಹ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿ ತಾಳ್ಮೆಯಿಂದ ಬೇಕಾದ ಸೌಲಭ್ಯಗಳನ್ನು ಪಡೆಯುವಂತೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಎಪಿಎಂಸಿ ಅಧ್ಯಕ್ಷ ಬೋಸಯ್ಯ, ತಾಪಂ ಇಒ ನರಸಪ್ಪ, ಗ್ರಾಪಂ ಅಧ್ಯಕ್ಷ ಕೆ.ಜಿ.ಸಿದ್ದನಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಕುಮಾರ ಗೌಡ, ಮುಖಂಡರಾದ ಜಗದೀಶ್, ವೈ.ಎಂ.ವೀರೇಶ್ವರಯ್ಯ, ಎಸ್.ಸಂಗಣ್ಣ, ಕೆ.ನಾಗರಾಜ, ಎಂ.ನಾಗೇಂದ್ರಪ್ಪ, ಕೆ.ಇ.ಬಿ.ಮಾರಪ್ಪ, ಸಣ್ಣ ಕೆಂಚಪ್ಪ, ಅಂಗನವಾಡಿ ಮೇಲ್ವಿಚಾರಕಿ ರುತಿಯಾ ಬೇಗಂ, ಕಾರ್ಯಕರ್ತೆಯರಾದ ಜ್ಯೋತಿ, ಎಚ್.ಎಂ.ಅನ್ನಪೂರ್ಣ ಇತರರಿದ್ದರು.