ಆಸ್ಪತ್ರೆಗಳತ್ತ ರೋಗಿಗಳ ದೌಡು, ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಉಲ್ಭಣ, ಕೋವಿಡ್ ಹರಡುವ ಆತಂಕ

9c925da4-6d1b-446c-b01b-f45eaaf39adb
Published on

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ವಾರದಿಂದ ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲೇ ಕೋವಿಡ್ ಹರಡುವಂತಹ ಆತಂಕ ಎದುರಾಗಿದೆ.

ಕರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಗುಂಪು ಸೇರದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಆದರೆ ಜ್ವರ ಮತ್ತು ತುರ್ತು ಆರೋಗ್ಯ ಚಿಕಿತ್ಸೆ ಅಗತ್ಯವಿರುವ ರೋಗಿಗಳು ಮಾತ್ರ ಆಸ್ಪತ್ರೆ, ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ಭೇಟಿ ನೀಡಬೇಕೆಂದು ಮನವಿ ಮಾಡಿದೆ. ಆದರೆ ಕಳೆದೊಂದು ವಾರದಲ್ಲಿ ಜಿಲ್ಲೆಯಲ್ಲಿ ನೆಗಡಿ, ಕೆಮ್ಮು, ಜ್ವರದಂಥ ಸಾಂಕ್ರಾಮಿಕ ರೋಗಗಳೂ ಉಲ್ಭಣಿಸಿದ್ದು, ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ.

ಸಾರ್ವಜನಿಕ ಆಸ್ಪತ್ರೆಗಳಲ್ಲಿ ಎಲ್ಲ ತರಹದ ರೋಗಿಗಳಿಗೂ ಒಂದೇ ಕಡೆ ಚಿಕಿತ್ಸೆ ನೀಡುತ್ತಿರುವುದರಿಂದ ಸಾರ್ವಜನಿಕರೂ ಕರೊನಾ ಭೀತಿ ಎದುರಿಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಅವರ ಸಂಬಂಧಿಕರು ಕಿಕ್ಕಿರಿಯುತ್ತಿದ್ದು, ಸಮರ್ಪಕ ಚಿಕಿತ್ಸೆ ನೀಡಲು ವೈದ್ಯ ಸಿಬ್ಬಂದಿ ಏದುಸಿರು ಬಿಡುವಂತಾಗಿದೆ.

ಎರಡರದ್ದೂ ಒಂದೇ ಲಕ್ಷಣ: ವಾರದಿಂದೀಚೆಗೆ ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳಲ್ಲೂ ಏರಿಕೆ ಕಂಡುಬರುತ್ತಿದ್ದು, ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರುವವರಲ್ಲಿ ಕಂಡುಬರುವ ರೋಗ ಲಕ್ಷಣ ಹಾಗೂ ಕೋವಿಡ್ ಸೋಂಕಿತರಲ್ಲಿ ಕಂಡುಬರುವ ರೋಗಲಕ್ಷಣಗಳಲ್ಲಿ ಸಾಮ್ಯತೆ ಇರುವುದರಿಂದ ಜಿಲ್ಲೆಯ ಜನ ಮತ್ತಷ್ಟು ಅತಂಕಗೊಂಡಿದ್ದಾರೆ. ಸಣ್ಣ ಕೆಮ್ಮು ಬಂದರೂ ಆಸ್ಪತ್ರೆಗಳತ್ತ ದೌಡಾಯಿಸುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಜನಜಂಗುಳಿ ಏರ್ಪಡುತ್ತಿದೆ.

ಇಂಜೆಕ್ಷನ್ ಕೊಡಲು ಒಂದೇ ಹಾಸಿಗೆ ಬಳಕೆ: ಸಾಮಾನ್ಯವಾಗಿ ವೈರಲ್ ಫೀವರ್‌ಗೆ ಕೊಡುವ ಚುಚ್ಚುಮದ್ದು ಕೊಠಡಿಯಲ್ಲೇ ಎಲ್ಲ ರೋಗಿಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಚುಚ್ಚುಮದ್ದು ನೀಡಲು ರೋಗಿಗಳನ್ನು ಮಲಗಲು ಹೇಳುವ ಬೆಡ್‌ಗಳನ್ನು ಬದಲಾಯಿಸುವುದಿಲ್ಲ. ಇದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡುವ ಆತಂಕ ಎದುರಾಗಿದೆ, ಅಲ್ಲದೆ ಯಾರಾದರೂ ಕೋವಿಡ್ ಸೋಂಕಿತರಿದ್ದರೆ ಅವರಿಂದ ಸಾಮಾನ್ಯ ರೋಗಿಗಳಿಗೂ ಸೋಂಕು ಹರಡಬಹುದು ಎಂಬುದು ಸಾರ್ವಜನಿಕರ ಭೀತಿಗೆ ಕಾರಣವಾಗಿದೆ.

ಮಕ್ಕಳ ಪಾಲಕರಿಗೆ ಭೀತಿ: ಜಿಲ್ಲೆಯ ಕೆಲವು ಖಾಸಗಿ ಕ್ಲಿನಿಕ್‌ಗಳು, ಸಣ್ಣ ಆಸ್ಪತ್ರೆಗಳು ಸೇರಿ ಬಹುಪಾಲು ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿಗಳಿಗೆ ಒಂದೇ ಕಡೆ ಪರೀಕ್ಷೆ ಹಾಗೂ ಚಿಕಿತ್ಸೆ ನಡೆಸಲಾಗುತ್ತಿದೆ. 3ನೇ ಅಲೆಯ ಕರೊನಾ ಸೋಂಕು ಮಕ್ಕಳನ್ನು ಹೆಚ್ಚು ಬಾಧಿಸಲಿದೆ ಎಂಬ ತಜ್ಞರ ವರದಿ ಹಿನ್ನೆಲೆಯಲ್ಲಿ ಪಾಲಕರು ತೀವ್ರವಾಗಿ ಆತಂಕಗೊಂಡಿದ್ದಾರೆ. ನ್ಯುಮೋನಿಯಾ ಮಾದರಿಯಲ್ಲಿ ಸಾಂಕ್ರಾಮಿಕ ರೋಗ ತೀವ್ರವಾಗಿ ಹರಡುತ್ತಿದ್ದು ಆಸ್ಪತ್ರೆಗಳಲ್ಲಿ ರೋಗಿಗಳು ತುಂಬಿತುಳುಕುತ್ತಿದ್ದಾರೆ.

ನಿಯಮ ಉಲ್ಲಂಘನೆ ಅವ್ಯಾಹತ: ಬಹುತೇಕ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ನಿಯಮಗಳನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ. ಯಾರೊಬ್ಬರೂ ಪರಸ್ಪರ ಅಂತರ ಕಾಯ್ದುಕೊಳ್ಳುತ್ತಿಲ್ಲ, ಮಾಸ್ಕ್ ಧರಿಸುವುದಿಲ್ಲ, ಸ್ಯಾನಿಟೈಸರ್ ಬಳಕೆ ಇಲ್ಲವಾಗಿದೆ, ವೈದ್ಯಸಿಬ್ಬಂದಿಯೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ, ಜನರೂ ಗಂಭೀರವಾಗಿ ಪರಿಗಣಿಸಿಲ್ಲ. ಇದರಿಂದ ಆಸ್ಪತ್ರೆಗಳ ಮೂಲಕ ಸೋಂಕು ಮತ್ತಷ್ಟು ಹರಡಲು ಕಾರಣವಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಆಸ್ಪತ್ರೆ ತುರ್ತು ಚಿಕಿತ್ಸೆಗೆ ಸೀಮಿತ: ಆಸ್ಪತ್ರೆಗಳಲ್ಲಿ ಗುಂಪು ಸೇರುವುದನ್ನು ತಪ್ಪಿಸಲು ಹಾಗೂ ಕೋವಿಡ್ ಸೋಂಕು ಹರಡುವಿಕೆ ತಡೆಗಟ್ಟುವ ಸಲುವಾಗಿ ಜ್ವರ ಮತ್ತು ತುರ್ತು ಆರೋಗ್ಯ ಚಿಕಿತ್ಸೆ ಅಗತ್ಯವಿರುವ ರೋಗಿಗಳು ಮಾತ್ರ ಆಸ್ಪತ್ರೆ, ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ಭೇಟಿ ನೀಡಬೇಕು. ಸಣ್ಣ ಪ್ರಮಾಣದ ಅನಾರೋಗ್ಯದಿಂದ ಬಳಲುತ್ತಿರುವ ಮತ್ತು ಹೊರರೋಗಿ ಚಿಕಿತ್ಸೆಯ ಅಗತ್ಯ ಇರುವ ರೋಗಿಗಳು ಸೇರಿ ದಂತ ಚಿಕಿತ್ಸೆಯ ಅಗತ್ಯವಿರುವವರು ಎರಡು ವಾರದವರೆಗೆ ಆಸ್ಪತ್ರೆಗಳಿಗೆ ಭೇಟಿ ನೀಡಬಾರದು. ಗುಂಪು ಸೇರುವುದನ್ನು ತಪ್ಪಿಸಲು ಹಾಗೂ ಸೋಂಕು ಹರಡುವಿಕೆ ತಡೆಗಟ್ಟುವ ಸಲುವಾಗಿ ಖಾಸಗಿ ಆಸ್ಪತ್ರೆಗಳು ಈ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.

ಚಿಕಿತ್ಸೆ ನೀಡಲು ಪರದಾಟ: ವಿಜಯಪುರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲೂ ಹೊರರೋಗೊಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರತಿನಿತ್ಯ ಆಸ್ಪತ್ರೆಯಲ್ಲಿ 100ಕ್ಕೂ ಹೆಚ್ಚು ಮಂದಿಗೆ ಕೋವಿಡ್ ತಪಾಸಣೆ ಮಾಡಲಾಗುತ್ತಿದೆ. ಮತ್ತೊಂದು ಕಡೆ ನೂರಾರು ಮಂದಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಇದರ ನಡುವೆ, ಹೊರರೋಗಿಗಳನ್ನು ತಪಾಸಣೆ ಮಾಡಿ, ಚಿಕಿತ್ಸೆ ನೀಡಲು ವೈದ್ಯರು, ಸಿಬ್ಬಂದಿ ಹೈರಾಣಾಗುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸ್ಥಳಾವಕಾಶವಿಲ್ಲದ ಕಾರಣ, ಜನಸಂದಣಿಯು ಹೆಚ್ಚಾಗುತ್ತಿದೆ. ಗರ್ಭಿಣಿಯರು, ಮಕ್ಕಳು, ವೃದ್ಧರು, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net