ಆಸ್ಪತ್ರೆಗಳ ಖಾಸಗೀಕರಣದಿಂದ ಹಕ್ಕುಗಳ ಹರಣ- ಹೋರಾಟಗಾರ್ತಿ ಎನ್. ಸುಧಾ ಬೇಸರ

nera_20230131232056849.jpg
Published on

ದಾವಣಗೆರೆ: ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ಬಡವರ ಹಕ್ಕುಗಳನ್ನು ಮೊಟಕು ಮಾಡಲಾಗಿದೆ ಎಂದು ಬೆಂಗಳೂರಿನ ಸಾಮಾಜಿಕ ಹೋರಾಟಗಾರ್ತಿ ಎನ್. ಸುಧಾ ಬೇಸರ ವ್ಯಕ್ತಪಡಿಸಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್, ದಲಿತ ಮುಸ್ಲಿಂ ಮಹಿಳಾ ಒಕ್ಕೂಟದ ಆಶ್ರಯದಲ್ಲಿ ಮಂಗಳವಾರ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ವೆಚ್ಚ ಭರಿಸುವುದು ಕಷ್ಟವಾಗಿದೆ. ಬಡವರು, ಕಾರ್ಮಿಕರು ಸರ್ಕಾರಿ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯೂ ಖಾಸಗಿಯಾದರೆ ಅವರೆಲ್ಲಿ ಹೋಗಬೇಕು. ಚಿಕಿತ್ಸಾ ವೆಚ್ಚ ಹೇಗೆ ಭರಿಸಬೇಕು ಎಂದು ಪ್ರಶ್ನಿಸಿದರು.

ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜ್ಯದಲ್ಲೇ ಅತಿ ಹೆಚ್ಚು ತಾಯಂದಿರು ಮರಣ ಹೊಂದುತ್ತಿದ್ದಾರೆ. ನಮ್ಮಲ್ಲಿ ಅತಿ ಹೆಚ್ಚು ನರ್ಸಿಂಗ್ ಹೋಂಗಳು, ಆಸ್ಪತ್ರೆಗಳಿದ್ದರೂ ಮರಣ ಪ್ರಮಾಣ ಹೆಚ್ಚಿರುವುದು ದುರಾದೃಷ್ಟಕರ. ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸುವ ಬದಲಾಗಿ ಮೂಲಸೌಲಭ್ಯಗಳ ಕೊರತೆಯನ್ನು ಸರಿಪಡಿಸಬೇಕು. ರೋಗಿಗಳಿಗೆ ಉತ್ತಮ ಸೇವೆ ಕಲ್ಪಿಸಬೇಕು. ನಿರ್ಲಕ್ಷೃದಿಂದ ಆಗುವ ಸಾವನ್ನು ತಪ್ಪಿಸಬೇಕಿದೆ ಎಂದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾಖಾನಂ ಮಾತನಾಡಿ, ಜನಸಂವಾದ ಕಾರ್ಯಕ್ರಮಕ್ಕೆ ಡಿಎಚ್‌ಒ, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಬರುವುದಾಗಿ ಹೇಳಿ ಗೈರಾಗಿದ್ದಾರೆ. ಜನಸಂವಾದವನ್ನು ಮಾಡುವುದನ್ನು ಪ್ರಶ್ನಿಸುವ ಅಧಿಕಾರಿಗಳು ಜನರ ಪ್ರಶ್ನೆಗಳಿಗೆ ಉತ್ತರಿಸಲು ಹಿಂದೇಟು ಹಾಕುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಕಾರ್ಯಕಾರಿ ಸಮಿತಿ ಸದಸ್ಯರಾದ ನಾಹೆರಾಬಾನು, ಹಸಿನಾಬಾನು, ಸಬ್ರಿನ್‌ತಾಜ್, ನೂರ್ ಫಾತಿಮಾ ಇದ್ದರು. ಯೂನಿಯನ್ ಪ್ರಧಾನ ಕಾರ್ಯದರ್ಶಿ ಎಂ. ಕರಿಬಸಪ್ಪ ಕಾರ್ಯಕ್ರಮ ನಿರೂಪಿಸಿದರು.

---

* ಮನವಿ ಸಲ್ಲಿಕೆ

ಸಂವಾದಕ್ಕೆ ಬಾರದ ಅಧಿಕಾರಿಗಳಿಗೆ ಸಂಘಟಕರು ಕಚೇರಿಗಳಿಗೆ ತೆರಳಿ ಮನವಿಪತ್ರ ಸಲ್ಲಿಸಿದರು. ಡಿಎಚ್‌ಒ ಡಾ.ನಾಗರಾಜ್, ಚಿಗಟೇರಿ ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ.ಷಣ್ಮುಖಪ್ಪ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಪ್ರಭಾರ ಅಧೀಕ್ಷಕಿ ಡಾ. ಭಾರತಿ ಅವರಿಗೆ ಮನವಿ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net