ಆಸ್ಪತ್ರೆ ಹಾಗೂ ಶಿಬಿರಗಳಿಗೆ ತೆರಳಿ ರಕ್ತದಾನ ಮಾಡಬೇಕು: ಬಾಲಕೃಷ್ಣ

ಆಸ್ಪತ್ರೆ ಹಾಗೂ ಶಿಬಿರಗಳಿಗೆ ತೆರಳಿ ರಕ್ತದಾನ ಮಾಡಬೇಕು: ಬಾಲಕೃಷ್ಣ
Published on

ಚನ್ನರಾಯಪಟ್ಟಣ: ರಕ್ತದಾನ ಮಾಡುವ ಮೂಲಕ ಅಪಘಾತ ಅಥವಾ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವವರನ್ನು ಅಗತ್ಯವಾಗಿ ಕಾಪಾಡಬಹುದು ಎಂದು ಶಾಸಕ ಸಿ.ಎನ.ಬಾಲಕೃಷ್ಣ ಹೇಳಿದರು.


ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಹಾಗೂ ಯೋಗಾಸನ ಪ್ರಾಣಾಯಾಮ ಧ್ಯಾನ ಶಿಬಿರದ ಗುರುವಂದನಾ ಕಾರ್ಯಕ್ರಮದ ಪ್ರಯುಕ್ತ ಬುಧವಾರ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ಅಪಘಾತ, ಶಸ್ತ್ರ ಚಿಕಿತ್ಸೆ ಹಾಗೂ ಇನ್ನಿತರ ತುರ್ತು ಸಂದರ್ಭದಲ್ಲಿ ರಕ್ತದ ಅಲಭ್ಯತೆಯಿಂದಲೇ ಸಾಕಷ್ಟು ಮಂದಿ ಮೃತಪಡುತ್ತಿದ್ದಾರೆ. ಇದನ್ನು ತಪ್ಪಿಸುವ ಸಲುವಾಗಿ ಯುವ ಸಮುದಾಯವು ಸ್ವಯಂ ಪ್ರೇರಿತರಾಗಿ ಆಸ್ಪತ್ರೆ ಹಾಗೂ ಶಿಬಿರಗಳಿಗೆ ತೆರಳಿ ರಕ್ತದಾನ ಮಾಡಬೇಕು ಎಂದರು.


ಲಯನ್ಸ್ ಕ್ಲಬ್, ರೋಟರಿ ಸಂಸ್ಥೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ರಕ್ತದಾನ ಶಿಬಿರ ಏರ್ಪಡಿಸಿ ರಕ್ತದಾನ ಕುರಿತು ಹೆಚ್ಚು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿವೆ. ಇದರಿಂದ ಬಹುತೇಕ ಮಂದಿ ರಕ್ತದಾನಕ್ಕೆ ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿ.ಮಹೇಶ್ ಮಾತನಾಡಿ, ಕಳೆದ 15 ದಿನಗಳಿಂದ ಯೋಗ ತರಬೇತಿ ಶಿಬಿರ ನಡೆಯುತ್ತಿದ್ದು ಇದರಲ್ಲಿ ಅನೇಕ ಮಂದಿ ಪ್ರಯೋಜನ ಪಡೆದಿದ್ದಾರೆ. ಯೋಗಾ ಹಾಗೂ ಧ್ಯಾನ ಆರೋಗ್ಯದ ಗುಟ್ಟು ಎಂದು ತಿಳಿಸಿದರು.


ಯೋಗ ಗುರು ಶ್ರೀ ಚೇತನ್ ಗುರೂಜಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಪುರಸಭಾ ಅಧ್ಯಕ್ಷೆ ರೇಖಾ ಅನಿಲ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಮಂಜಣ್ಣ, ಶಿವಣ್ಣ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಲಕ್ಷ್ಮೀನಾರಾಯಣ್, ಹಾಸನ ರಕ್ತ ನಿಧಿ ಬ್ಯಾಂಕಿನ ಡಾ.ನಾಗಲಕ್ಷ್ಮೀ, ಗುರುಮೂರ್ತಿ, ಮಮತಾ, ನಾಗರಾಜ್, ವಾಸುದೇವ್, ಕನ್ನಡ ವೀರ ಸಮರ ಸೇನೆಯ ರಾಜ್ಯಾಧ್ಯಕ್ಷ ಭರತ್‌ಗೌಡ, ಆಸ್ಪತ್ರೆಯ ವೈದ್ಯ ವೃಂದ ಹಾಗೂ ಸಿಬ್ಬಂದಿ, ಆದಿಚುಂಚನಗಿರಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಮತ್ತು ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net