

ಕಲಬುರಗಿ: ರೋಗಿಯ ಸಂಬಂಧಿಕರು ಸೇರಿ ವೈದ್ಯರು, ಪಿಜಿ ವಿದ್ಯಾರ್ಥಿ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದ ಸೇಡಂ ರಸ್ತೆಯಲ್ಲಿರುವ ಬಸವೇಶ್ವರ ಆಸ್ಪತ್ರೆಯ ಮುಂಭಾಗದಲ್ಲಿ ವೈದ್ಯರು, ಪಿಜಿ ವಿದ್ಯಾರ್ಥಿಗಳು, ನರ್ಸಿಂಗ್ ಸಿಬ್ಬಂದಿ ಶನಿವಾರ ಮಿಂಚಿನ ಪ್ರತಿಭಟನೆ ನಡೆಸಿದರು.
ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಕೊನೆಯುಸಿರೆಳೆದಿದ್ದರಿಂದ ಸಂಬಂಧಿಕರು ಕೋಪಗೊಂಡು ಐಸಿಯು ವಾರ್ಡನಲ್ಲಿ ಕರ್ತವ್ಯದಲ್ಲಿದ್ದ ನರ್ಸ್ , ಸಿಬ್ಬಂದಿ ಮತ್ತು ವೈದ್ಯರ ಮೇಲೆ ಹಲ್ಲೆ ನಡೆಸಿ, ವೈದ್ಯಕೀಯ ಸಲಕರಣೆಗಳನ್ನು ಧ್ವಂಸಗೊಳಿಸಿದ್ದಾರೆ. ನಮ್ಮ ಪ್ರಾಣದ ಹಂಗು ತೊರೆದು ರೋಗಿಗಳ ಸೇವೆ ಮಾಡುತ್ತೇವೆ. ಹೀಗಿರುವಾಗ ಹಲ್ಲೆ ನಡೆಸುವುದು ಸರಿಯಲ್ಲ ಎಂದು ಹೇಳಿದರು.
ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ, ಪಿಐಸಿಯು ವಾಡರ್್ನಲ್ಲಿ ಕರ್ತವ್ಯ ನಿರ್ವಹಿಸುತಿದ್ದ ವೈದ್ಯರು ಹಾಗೂ ನರ್ಸ್ ಮೇಲೆ ಹಲ್ಲೆ ಮಾಡಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಸ್ಪತ್ರೆಯ ಆವರಣದಲ್ಲಿ ಭಿತ್ತ ಪತ್ರಗಳನ್ನು ಪ್ರದರ್ಶಿ ಸುವ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ರೋಗಿಯೊಬ್ಬರು ಚಿಕಿತ್ಸೆ ಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ರೋಗಿಯ ಸಾವಿಗೆ ವೈದ್ಯರು ಕಾರಣವೆಂದು ಆರೋಪಿಸಿ ಆತನ ಸಂಬಂಧಿಕರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸಿದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಆರೋಪಿಗಳನ್ನು ಪತ್ತೆ ಮಾಡಿ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು. ಹಲ್ಲೆ ನಡೆಸಿದ್ದರ ಬಗ್ಗೆ ಆಸ್ಪತ್ರೆಯವರು ದೂರು ನೀಡಿಲ್ಲ.
ಪ್ರತಿಭಟನೆಯಲ್ಲಿ ಅಡಿವೆಪ್ಪ, ಮಾರುತಿ, ಮಹೇಶ, ಖಂಡೇರಾವ, ರುಕ್ಕಪ್ಪ ಸೇರಿ ಹಲವು ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ್ದರು.