

ಕೊಪ್ಪಳ:ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆ ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದೆ. ಬಾಕಿ ಕಾಮಗಾರಿಗೆ ಅಗತ್ಯ ಅನುದಾನ ಒದಗಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಭರವಸೆ ನೀಡಿದರು.
ನಗರದ ಹೊಲವಲಯದ ಕಿಮ್ಸ್ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಕೊಪ್ಪಳದಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ ಕಿಮ್ಸ್ ಮಂಜೂರಾಗಿದೆ. ಆಸ್ಪತ್ರೆ ಕಟ್ಟಡ ಕಾಮಗಾರಿಯನ್ನು ನಾವೇ ಆರಂಭಿಸಿದ್ದೇವೆ. ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಹಿಂದಿನ ಬಿಜೆಪಿ ಸರ್ಕಾರ ಯಾವುದೇ ಅನುದಾನ ನೀಡದ ಕಾರಣ ಕಾಮಗಾರಿ ಪೂರ್ಣಗೊಂಡಿಲ್ಲ. 450 ಹಾಸಿಗೆ ಆಸ್ಪತ್ರೆ ಇದಾಗಿದ್ದು, ಜನರಿಗೆ ಅನುಕೂಲವಾಗಲಿದೆ. ಬಾಕಿ ಕಾಮಗಾರಿಗೆ 47 ಕೋಟಿ ರೂ.ಗೂ ಹೆಚ್ಚು ಅನುದಾನ ಅವಶ್ಯವಿದೆ. ಈಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯಲಾಗುವುದು. ನಂತರ ಒಳಾಂಗಣ ಉಪಕರಣಗಳಿಗೆ ಬೇಕಾದ ಅನುದಾನ ನೀಡಿ ಆಸ್ಪತ್ರೆ ಆರಂಭಿಸಲಾಗುವುದು. ಇನ್ನು ಆರು ತಿಂಗಳಲ್ಲಿ ಕಟ್ಟಡ ಕಾಮಗಾರಿ ಮುಗಿಯಲಿದೆ ಎಂದರು.
ಸದ್ಯ ಸೂಪರ್ ಸ್ಪೇಷಾಲಟಿ ಸೇವೆಗಳು ಕೊಪ್ಪಳದಲ್ಲಿ ಲಭ್ಯವಿಲ್ಲ. ಹಿಂದಿನವರು ಯಾವುದೇ ತಯಾರಿ ಇಲ್ಲದೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಘೋಷಿಸಿ ಹೋದರು. ಮೊದಲು ಈಗಿರುವ ಸೇವೆಗಳು ಪೂರ್ಣ ಪ್ರಮಾಣದಲ್ಲಿ ಸಿಗುವಂತೆ ಮಾಡುತ್ತೇವೆ. ಸಿಬ್ಬಂದಿ ಕೊರತೆ ಇದ್ದಲ್ಲಿ ನೇಮಕಕ್ಕೆ ಕ್ರಮವಹಿಸಲಾಗುವುದು. ಹಂತ ಹಂತವಾಗಿ ಸೂಪರ್ ಸ್ಪೇಷಾಲಿಟಿ ಸೇವೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ, ಶಾಸಕ ರಾಘವೇಂದ್ರ ಹಿಟ್ನಾಳ್, ಕಿಮ್ಸ್ ನಿರ್ದೇಶಕ ಡಾ.ವಿಜಯನಾಥ ಇಟಗಿ, ವೈದ್ಯಕೀಯ ಅಧೀಕ್ಷಕ ಡಾ.ವೇಣುಗೋಪಾಲ, ಡಿವೈಎಸ್ಪಿ ಶರಣಬಸಪ್ಪ ಸುಬೇದಾರ, ತಹಸೀಲ್ದಾರ ವಿಠ್ಠಲ ಚೌಗಲಾ, ನಗರ ಠಾಣೆ ಪಿಐ ಸಂತೋಷ ಹಳ್ಳೂರ ಇತರರಿದ್ದರು.