ಆಸ್ತಿಯನ್ನೇ ಮರೆತ ಟೂಡಾ ; ವಾಣಿಜ್ಯ ಸಂಕಿರ್ಣದ ಅಂದಗೆಡಿಸಿದ್ದರೂ ಮಾಹಿತಿ ಇಲ್ಲ!

19TMK_TUDA
Published on

ತುಮಕೂರು : ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ) ತನ್ನ ಆಸ್ಥಿತ್ವವನ್ನೇ ಮರೆತಿದೆ, ನಗರದಲ್ಲಿರುವ ವಾಣಿಜ್ಯ ಸಂಕೀರ್ಣದ ಸ್ಥಿತಿಗತಿಯ ಬಗ್ಗೆಯೂ ಮಾಹಿತಿ ಇಲ್ಲ ಎಂಬ ಅಚ್ಚರಿ ಮಾಹಿತಿ ಹಕ್ಕು ಕಾಯ್ದೆ ಮೂಲಕ ಪಡೆದ ಉತ್ತರದಲ್ಲಿ ಬಯಲಾಗಿದೆ.

ನಗರದ ಶೆಟ್ಟಿಹಳ್ಳಿ ರಿಂಗ್ ರಸ್ತೆ ಇದೀಗ ಚತುಷ್ಪಥವಾಗಿ ಅಭಿವೃದ್ಧಿ ಹೊಂದಿದ್ದು, ನಗರದ ಅತ್ಯಂತ ಪ್ರತಿಷ್ಠಿತ ಹಾಗೂ ಅತ್ಯಧಿಕ ವಾಹನ ಸಂಚಾರದ ರಸ್ತೆಯಾಗಿ ವಾರ್ಪಟ್ಟಿದೆ. ಇಂತಹದೊಂದು ರಸ್ತೆಗೆ ಹೊಂದಿಕೊಂಡಂತೆ ಟೂಡಾ ನಿರ್ಮಿಸಿರುವ ವಾಣಿಜ್ಯ ಸಂಕಿರ್ಣ ಖಾಸಗಿ ವ್ಯಕ್ತಿಗಳ ಆಸ್ತಿಯಾಗಿದ್ದು, ಈ ಬಗ್ಗೆ ಟೂಡಾಗೆ ಮಾಹಿತಿಯೇ ಇಲ್ಲ.

ಟೂಡಾದಿಂದ ಬಾಡಿಗೆ ಪಡೆದಿರುವ ಮಳಿಗೆ ಮಾಲೀಕರು ಕಟ್ಟಡದಿಂದ ಹೊರಭಾಗಕ್ಕೆ ಸೆಟ್‌ಬ್ಯಾಕ್ ಜಾಗದಲ್ಲಿ ಮನಬಂದಂತೆ ಗ್ರಿಲ್ ಹಾಕಿಕೊಂಡು ಶೀಟ್ ಅಳವಡಿಸಿಕೊಂಡಿದ್ದಾರೆ. ಈ ರೀತಿ ಸರ್ಕಾರಿ ಸ್ವತ್ತಿನಲ್ಲಿ ಸರ್ಕಾರದ ಸೆಟ್‌ಬ್ಯಾಕ್ ನಿಯಮವನ್ನೇ ಗಾಳಿಗೆ ತೂರಿ ಸರ್ಕಾರಿ ಕಟ್ಟಡವನ್ನು ವಿರೂಪಗೊಳಿಸಲಾಗಿದೆ. ಈ ಅಕ್ರಮದ ಬಗ್ಗೆ ನಗರದ ಸಾರ್ವಜನಿಕ ಹೋರಾಟಗಾರ ಆರ್.ವಿಶ್ವನಾಥನ್ ವಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಟೂಡಾ ನೀಡಿರುವ ಉತ್ತರ ಅಚ್ಚರಿ ತರಿಸುವಂತಿದೆ.

ಮಾ.18ರಂದು ಟೂಡಾಕ್ಕೆ ಅರ್ಜಿ ಸಲ್ಲಿಸಿ ಸದರಿ ಕಾಂಪ್ಲೆಕ್ಸ್‌ನಲ್ಲಿ ಮಳಿಗೆದಾರರು ಮೂಲ ಕಾಂಪ್ಲೆಕ್ಸ್ ಸೌಂದರ್ಯಕ್ಕೆ ಧಕ್ಕೆ ತರುವಂತೆ ಅಕ್ರಮವಾಗಿ ಹೊರಭಾಗ ಮನಬಂದಂತೆ ಅಳವಡಿಸಿಕೊಂಡಿರುವ ಶೀಟ್ ಮೊದಲಾದವನ್ನು ತೆರವುಗೊಳಿಸಲು ಕೈಗೊಂಡ ಕ್ರಮದ ವಿವರ ನೀಡುವಂತೆ ಕೋರಲಾಗಿತ್ತು. ಇದಕ್ಕೆ ಟೂಡಾ ವತಿಯಿಂದ ಏ.6ರಂದು ನೀಡಿರುವ ಉತ್ತರದಲ್ಲಿ ಈ ಬಗ್ಗೆ ಮಾಹಿತಿಯೇ ಇಲ್ಲ ಎಂದು ಉತ್ತರಿಸಿದ್ದಾರೆ.

ನಗರದ ಪ್ರಮುಖ ರಸ್ತೆಯಲ್ಲಿರುವ ಈ ವಾಣಿಜ್ಯ ಸಂಕಿರ್ಣದಲ್ಲಿ 20 ಮಳಿಗೆಗಳಿವೆ, ಇವುಗಳಲ್ಲಿ ಕೇವಲ 8 ಮಳಿಗೆ ವಾತ್ರ ಬಾಡಿಗೆಗೆ ನೀಡಲ್ಪಟ್ಟಿದ್ದು, ಉಳಿದ 12 ಮಳಿಗೆ ಖಾಲಿ ಇವೆ ಎಂದು ಟೂಡಾ ತಿಳಿಸಿದೆ. 8 ಮಳಿಗೆಗಳಲ್ಲಿ ಬಾಡಿಗೆದಾರ ಗಂಗಣ್ಣ ಎಂಬುವವರ 4 ಮಳಿಗೆಗಳಿವೆ. ಮಿಕ್ಕಂತೆ ಹನುಮಯ್ಯ, ಅಮೃತ್‌ಕುವಾರ್, ಯಮುನಾದೇವಿ ಮತ್ತು ಅನ್ನದಾನಪ್ಪ ಅವರು ತಲಾ ಒಂದೊಂದು ಮಳಿಗೆಗಳನ್ನು ಬಾಡಿಗೆಗೆ ಪಡೆದಿದ್ದಾರೆ.

8 ಮಳಿಗೆಗಳ ಪೈಕಿ 6 ಮಳಿಗೆಗಳಿಗೆ ತಲಾ 3894 ರೂ. ತಿಂಗಳ ಬಾಡಿಗೆ ನಿಗದಿಯಾಗಿದೆ, ಮಿಕ್ಕ 2 ಮಳಿಗೆಗಳ ಪೈಕಿ ಒಂದಕ್ಕೆ 4074 ರೂ. ಹಾಗೂ ಮತ್ತೊಂದಕ್ಕೆ 3809ರೂ. ತಿಂಗಳ ಬಾಡಿಗೆ ನಿಗದಿಗೊಂಡಿದೆ. ಇದೇ ರೀತಿ 6 ಮಳಿಗೆಗಳಿಂದ ತಲಾ 1.83 ಲಕ್ಷ ರೂ. ಮುಂಗಡ ಠೇವಣಿ ಸ್ವೀಕೃತವಾಗಿದ್ದರೆ, ಮಿಕ್ಕ 2 ಅಂಗಡಿಗಳ ಪೈಕಿ ಒಂದರಲ್ಲಿ 1.73 ಲಕ್ಷ ರೂ. ಹಾಗೂ ಇನ್ನೊಂದರಲ್ಲಿ 1.71 ಲಕ್ಷ ರೂ. ಮುಂಗಡ ಠೇವಣಿ ಪಾವತಿಯಾಗಿದೆ ಎಂದು ಟೂಡಾ ವಿವರ ನೀಡಿದೆ. ಎಲ್ಲರೂ ಮೂಲ ಬಾಡಿಗೆದಾರರಾಗಿದ್ದು, ಯಾರೂ ಸಹ ಬಾಡಿಗೆ ಬಾಕಿ ಉಳಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ. 2019ರ ಡಿ.18 ರಂದು ಒಮ್ಮೆ ಹಾಗೂ 2020ರ ಸೆ.22 ರಂದು ಮತ್ತೊಮ್ಮೆ ಮಳಿಗೆಗೆ ಸಂಬಂಧಿಸಿದಂತೆ ಹರಾಜು ಪ್ರಕ್ರಿಯೆ ನಡೆಸಿರುವುದಾಗಿ ಟೂಡಾ ಅರ್ಜಿದಾರರಿಗೆ ಮಾಹಿತಿ ನೀಡಿದೆ.

ಟೂಡಾಗೆ ತನ್ನ ಆಸ್ತಿಯ ಬಗ್ಗೆಯೇ ಸರಿಯಾದ ಮಾಹಿತಿ ಇಲ್ಲ, ಸಾರ್ವಜನಿಕರ ಆಸ್ತಿಯನ್ನು ಬಾಡಿಗೆದಾರರು ತಮಗಿಷ್ಟ ಬಂದಂತೆ ಬದಲಾಯಿಸಿಕೊಂಡಿದ್ದಾರೆ. ಇದರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿಯೂ ಇಲ್ಲ. ಅಧಿಕಾರಿಗಳು ಸರ್ಕಾರದ ಆಸ್ತಿ ಕಾಪಾಡುವ ಕೆಲಸ ಮಾಡುತ್ತಿಲ್ಲ, ಮಳಿಗೆಗಳು ಖಾಲಿಯಿದ್ದರೂ ಅದನ್ನು ಹರಾಜು ಮಾಡುವ ಕೆಲಸ ಮಾಡುತ್ತಿಲ್ಲ.

ಆರ್.ವಿಶ್ವನಾಥನ್ ಸಾಮಾಜಿಕ ಕಾರ್ಯಕರ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net